ಇಬ್ಬರ ವಿರುದ್ಧ ಗೂಂಡಾಕಾಯ್ದೆ ದಾಖಲು

ಮಂಗಳೂರು, ಜು.೨೧- ಕೆಲ ಸಮಯದ ಹಿಂದೆ ವೆಲೆನ್ಸಿಯಾ ಜಂಕ್ಷನ್ ಬಳಿ ಸಾರ್ವಜನಿಕವಾಗಿ ಭಯದ ವಾತಾವರಣ ಸೃಷ್ಟಿಸಿದ್ದಲ್ಲದೆ, ಕೋಳಿ ಅಂಗಡಿ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದ ಆರೋಪಿಗಳಿಬ್ಬರ ಮೇಲೆ ಮಂಗಳೂರು ಪೊಲೀಸ್ ಆಯುಕ್ತರು ಗೂಂಡಾ ಕಾಯ್ದೆ ಹೇರಿದ್ದಾರೆ.
ಆರೋಪಿಗಳಾದ ಜಲ್ಲಿಗುಡ್ಡೆ ಬಜಾಲ್ ನಿವಾಸಿ ಪ್ರೀತಂ ಪೂಜಾರಿ ಯಾನೆ ಪ್ರೀತೇಶ್ (26) ಹಾಗೂ ಎಕ್ಕೂರು ನಿವಾಸಿ ಧೀರಜ್ ಕುಮಾರ್ ಯಾನೆ ಧೀರು (27) ಎಂಬಾತನ ವಿರುದ್ಧ ಗೂಂಡಾ ಕಾಯ್ದೆ ದಾಖಲಾಗಿದೆ. ಆರೋಪಿಗಳಿಬ್ಬರು ಸಮಾಜಘಾತುಕ ಶಕ್ತಿಗಳಾಗಿ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ ಇವರಿಬ್ಬರ ಮೇಲೆ ಗೂಂಡಾ ಕಾಯ್ದೆ ಹೇರಬೇಕೆಂದು ಕಂಕನಾಡಿ ಠಾಣಾಧಿಕಾರಿ ಶಿಫಾರಸು ಮಾಡಿರುವುದನ್ನು ಪರಿಗಣಿಸಿ ತಮ್ಮ ಅಧಿಕಾರವನ್ನು ಚಲಾಯಿಸಿ ಅವರ ಮೇಲೆ ಗೂಂಡಾ ಕಾಯ್ದೆ ಹೇರಿರುವುದಾಗಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ. ಕೆಲ ತಿಂಗಳ ಹಿಂದೆ ಸಾರ್ವಜನಿಕವಾಗಿ ಕೊಲೆ ಬೆದರಿಕೆ ಪ್ರಕರಣದಲ್ಲಿ ಜೈಲಿನಲ್ಲಿರುವ ಈ ಇಬ್ಬರು ಆರೋಪಿಗಳು ಜಾಮೀನು ಪಡೆಯುವ ಪ್ರಯತ್ನದಲ್ಲಿದ್ದಾಲೇ ಗೂಂಡಾ ಕಾಯ್ದೆ ಹೇರಲಾಗಿದ್ದು, ಆರೋಪಿಗಳನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಪ್ರೀತೇಶ್ ಮತ್ತು ಧೀರಜ್ ಕುಮಾರ್ ಎಂಬವರ ವಿರುದ್ಧ ಈಗಾಗಲೇ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ದಾಖಲಾಗಿದ್ದು, ಕಳೆದ ಹಲವು ವರ್ಷಗಳಿಂದ ಮದ್ಯಪಾನ ವ್ಯಸನ ಹೊಂದಿರುವುದರಲ್ಲದೆ, ಗಂಭೀರ ಅಪರಾಧ ಪ್ರಕರಣಗಳ ಮೂಲಕ ಸಾರ್ವಜನಿಕರಿಗೆ ಅಪಾಯ ಮತ್ತು ಬೆದರಿಕೆ ಭಾವನೆ ಉಂಟು ಮಾಡುವ ರೀತಿಯಲ್ಲಿ ವರ್ತಿಸಿರುವುದು ಕಂಡು ಬಂದಿದೆ. ಧೀರಜ್ 2015ರಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಗುರುತಿಸಿಕೊಂಡಿದ್ದು, ಆಟೋ ರಿಕ್ಷಾ ಚಾಲನೆ ಮಾಡುವುದಾಗಿ ಹೇಳಿಕೊಡಿದ್ದರೂ ಯಾವುದೇ ನಿಖರ ಉದ್ಯೋಗ ಹೊಂದಿಲ್ಲ. ಈತನ ಮೇಲೆ ದರೋಡೆಗೆ ತಯಾರಿ, ಕೊಲೆಗೆ ಯತ್ನ, ಅಪಹರಣ ಮತ್ತು ಕೊಲೆಗೆ ಯತ್ನ, ಕೊಲೆಗೆ ಯತ್ನ ಮತ್ತು ಗಂಭೀರ ಗಾಯ, ಅಪರಾಧ ಒಳಸಂಚು, ಹಲ್ಲೆ, ದರೋಡೆ ಮತ್ತು ಹಲ್ಲೆ ಸೇರಿ ಒಟ್ಟು 12 ಪ್ರಕರಣಗಳು ದಾಖಲಾಗಿವೆ. ಈತ ಹಾಗೂ ಈತನ ಸಹಚರರು ಸುಮಾರು 66 ಮಂದಿಯ ಗ್ಯಾಂಗ್ ರಚಿಸಿಕೊಂಡು ಸುಮಾರು 34ಕ್ಕೂ ಅಧಿಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಪ್ರೀತಂ ವಿರುದ್ಧವೂ ಜೀವ ಬೆದರಿಕೆ ಮತ್ತು ಗಾಂಜಾ ಸೇವೆ, ಕೊಲೆಗೆ ಯತ್ನ ಮತ್ತು ಬೆದರಿಕೆ, ಅಪಹರಣ ಮತ್ತು ಬೆದರಿಕೆ, ಬೆದರಿಕೆ ಮತ್ತು ಹಲ್ಲೆ, ಹಲ್ಲೆ ಮತ್ತು ಗಾಂಜಾ ಸೇವನೆ ಹಾಗೂ ಅಕ್ರಮ ಕೂಟ ಸೇರಿ ದರೋಡೆ, ಕೊಲೆ ಯತ್ನ ಮತ್ತು ಗಾಂಜಾ ಸೇವನೆ, ಕೊಲೆ ಯತ್ನ ಮತ್ತು ಗಾಂಜಾ ಸೇವನೆ ಸೇರಿ ಒಟು 12 ಪ್ರಕರಣಗಳು ದಾಖಲಾಗಿದ್ದು, ಕಂಕನಾಡಿ ಠಾಣೆಯಲ್ಲಿ ರೌಡಿಶೀಟರ್ ಹೊಂದಿದ್ದಾನೆ. ಇವರಿಬ್ಬರಿಗೆ ಜಾಮೀನು ದೊರಕಿದ್ದಲ್ಲಿ ಮತ್ತೆ ಸಾರ್ವಜನಿಕವಾಗಿ ಅಶಾಂತಿ ಸೃಷ್ಟಿಸುವ ಕೃತ್ಯದಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇರುವುದರಿಂದ ಇವರಿಬ್ಬರ ಮೇಲೆ ಗೂಂಡಾ ಕಾಯ್ದೆ ಹೇರುವಂತೆ ಕಂಕನಾಡಿ ಠಾಣಾಧಿಕಾರಿ ಶಿಫಾರಸು ಮಾಡಿದ್ದರು.