ಇಬ್ಬರೆಂಡರಿದ್ದರೂ ಗಂಡು ಸಂತಾನಕ್ಕಾಗಿ ಅಪ್ರಾಪ್ತೆ ವಿವಾಹಕ್ಕೆ ಮುಂದಾದ ವ್ಯಕ್ತಿ ಜೈಲು‌ಪಾಲು

ಬಳ್ಳಾರಿ: ತನಗೆ ಈಗಾಗಾಲೇ ಇಬ್ಬರು ಹೆಂಡತಿಯರಿದ್ದರೂ ಅವರಿಗೆ ಗಂಡು ಸಂತಾನ ಇಲ್ಲವೆಂದು. ಗಂಡು ಸಂತಾನಕ್ಕಾಗಿ ಅಪ್ರಾಪ್ತ 16 ವರ್ಷದ ಬಾಲಕಿಯನ್ನು ಮೂರನೇ ಮದುವೆಯಾಗಲು ಬಳ್ಳಾರಿ ಮೂಲದ ವ್ಯಕ್ತಿ ಮುಂದಾಗಿದ್ದ ಘಟನೆ ನಡೆದಿದೆ.

ಜಿಲ್ಲೆಯ ಕಂಪ್ಲಿ ತಾಲೂಕಿನ ಜೀರಿಗನೂರು ಗ್ರಾಮದ ಅಪ್ರಾಪ್ತೆಯನ್ನು ಬಳ್ಳಾರಿ ನಗರದ ನಿವಾಸಿ ಕಿರಾಣಿ ಅಂಗಡಿ ಜಡಿಯಪ್ಪ (58), ಜೀರಿಗಿನೂರು ಗ್ರಾಮದ ಸಮೀಪದ ದೇಗುಲ ಒಂದರಲ್ಲಿ ವಿವಾಹವಾಗಲು ಮುಂದಾಗುತ್ತಿರೋದನ್ನ ಸೂಕ್ಷ್ಮವಾಗಿ ಗಮನಿಸಿದ ಸಾರ್ವಜನಿಕರು‌ ಕೂಡಲೇ 1098 ಸಹಾಯವಾಣಿಗೆ ಕರೆ‌‌‌‌ ಮಾಡಿದ್ದಾರೆ. ಆಗ ಅಧಿಕಾರಿಗಳಿಗೆ ವಿಷಯ ತಿಳಿದು ಕಂಪ್ಲಿ‌ ತಹಶೀಲ್ದಾರ್ ಗೌಸಿಯಾಬೇಗಂ ಮತ್ತು ಸಿಬ್ಬಂದಿ ಸಿನಿಮೀಯ ಮಾದರಿಯಲ್ಲಿ ಮಧ್ಯ ರಾತ್ರಿಯೇ ದಾಳಿ ಮಾಡಿ ಬಾಲಕಿಯನ್ನ ರಕ್ಷಿಸಿದ್ದಾರೆ.

ಸದ್ಯ ಜಡಿಯಪ್ಪ ಪೊಲೀಸರ ಅತಿಥಿಯಾಗಿದ್ದಾನೆ. ವಧುವಿನ ತಂದೆ ತಾಯಿ ಹಾಗೂ ಮಧ್ಯಸ್ಥಿಕೆ ವಹಿಸಿದ್ದ ಮಹಿಳೆಯೊಬ್ಬಳ ಮೇಲೆ ದೂರು ದಾಖಲಾಗಿದೆ.