ಇಬ್ಬರು ಸುಲಿಗೆಕೋರರ ಸೆರೆ

ಬೆಂಗಳೂರು, ಏ.೧೦-ವ್ಯಕ್ತಿಯೊಬ್ಬರನ್ನು ಡ್ರಾಪ್ ಮಾಡಲು ಬರುವಂತೆ ಕರೆಸಿಕೊಂಡು ಸಾವಿರಾರು ನಗದು ದೋಚಿ ಪರಾರಿಯಾಗಿದ್ದ ಇಬ್ಬರು ಸುಲಿಗೆಕೋರರನ್ನು ಬಂಧಿಸುವಲ್ಲಿ ಬ್ಯಾಡರಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂಡಲಪಾಳ್ಯದ ಪಂಚಶೀಲನಗರದ ಪ್ರಭಾತ್ ತಾಮ್‌ಶಿ(೨೨)ಸೀಗೆಹಳ್ಳಿಯ ಹುಲಿಯೂರಮ್ಮ ಬಡಾವಣೆಯ ಪುನೀತ್ ಕುಮಾರ್(೨೩)ಬಂಧಿತ ಸುಲಿಗೆಕೋರರಾಗಿದ್ದಾರೆ ಎಂದು ಡಿಸಿಪಿ ಗಿರೀಶ್ ತಿಳಿಸಿದರು.
ಕಳೆದ ಮಾ.೧೯ ರಂದು ರಾತ್ರಿ ೧೦-೩೦ರ ವೇಳೆ ಸುಂಕದಕಟ್ಟೆಯ ದೀನಬಂಧು ನಾಯಕ್ ಅವರ ಮೊಬೈಲ್ ಗೆ ಅಪರಿಚಿತ ಕರೆ ಮಾಡಿ ನೆಲಮಂಗಲಕ್ಕೆ ಡ್ರಾಪ್ ನೀಡಲು ಈಸ್ಟ್ ವೆಸ್ಟ್ ಕಾಲೇಜ್ ಬಳಿ ಬರುವಂತೆ ಕರೆಯಿಸಿಕೊಂಡು ಅಲ್ಲಿಂದ ನೆಲಮಂಗಲಕ್ಕೆ ಕರೆದುಕೊಂಡು ಹೋಗಿದ್ದರು.
ಸ್ಕೂಟರ್ ಜಪ್ತಿ:
ಅಲ್ಲಿಗೆ ಮತ್ತೊಬ್ಬ ಆರೋಪಿತನನ್ನು ಆಟೋದಲ್ಲಿ ಕರೆಯಿಸಿಕೊಂಡು ನಂತರ ದೀನಬಂಧು ಹೊಂಡಾ ಅಕ್ಟಿವಾ ಸ್ಕೂಟರ್ ಕಸಿದು ಆಟೋ ದಲ್ಲಿ ಅಪಹರಿಸಿ ಕೈಗಳಿಂದ ಹಲ್ಲೆ ಮಾಡಿ ಬೆದರಿಸಿ ಅಕೌಂಟ್ ಹಾಗೂ ನಗದು ರೂಪದಲ್ಲಿ ರೂ.೮,೫೦೦ ಗಳನ್ನು ಕಸಿದು ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿ ೮೦ ಸಾವಿರ ಮೌಲ್ಯದ ಅಕ್ಟಿವಾ ಸ್ಕೂಟರ್ ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾ ಹಾಗೂ ರೆಡ್‌ಮೀ ೮ಎ ಮೊಬೈಲ್ ನ್ನು ವಶಪಡಿಸಿಕೊಂಡು ಬ್ಯಾಡರಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಸುಲಿಗೆ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.