ಇಬ್ಬರು ಸುಲಿಗೆಕೋರರ ಬಂಧನ

ಕಲಬುರಗಿ,ಜೂ.17-ನಗರದ ಜಿಮ್ಸ್ ಆಸ್ಪತ್ರೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ್ದ ಮತ್ತು ಸೂಪರ್ ಮಾರ್ಕೆಟ್‍ನ ಸಂಗೀತಾ ಮೊಬೈಲ್ ಅಂಗಡಿ ಮುಂದೆ ಗೆಳೆಯರೊಂದಿಗೆ ಮಾತನಾಡುತ್ತ ನಿಂತಿದ್ದಾಗ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡು ಹೋಗಲು ಯತ್ನಿಸಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬ್ರಹ್ಮಪುರ ಪೊಲೀಸರು ಬಂಧಿಸಿದ್ದಾರೆ.
ಜಿಮ್ಸ್ ಆಸ್ಪತ್ರೆ ಮುಂದೆ ನಿಲ್ಲಿಸಿದ್ದ 93 ಸಾವಿರ ರೂ.ಮೌಲ್ಯದ ಹೊಂಡಾ ಯೂನಿಕಾರ್ನ್ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಕಾಲೋನಿಯ ಶೇಖ್ ಹುಸೇನಿ ಅಲಿಯಾಸ್ ಬಿಸಲೇರಿ (23) ಎಂಬಾತನನ್ನು, ಸೂಪರ್ ಮಾರ್ಕೆಟ್‍ನ ಸಂಗೀತಾ ಮೊಬೈಲ್ ಅಂಗಡಿ ಮುಂದೆ ಗೆಳೆಯರೊಂದಿಗೆ ಮಾತನಾಡುತ್ತ ನಿಂತಿದ್ದ ಮಹ್ಮದ್ ಅಲಿಮೋದ್ದಿನ್ ಎಂಬುವವರ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡು ಹೋಗಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗರಗಾ ರಸ್ತೆಯ ನೂರಾನಿ ಮೊಹಲ್ಲಾದ ಮಹ್ಮದ್ ತಬೇರೆಸ್ ಅಲಿಯಾಸ್ ಶ್ಯಾಮ್ಸ್ ಎಂಬಾತನನ್ನು ಬಂಧಿಸಿದ್ದಾರೆ.
ಈ ಎರಡೂ ಪ್ರಕರಣಗಳ ತನಿಖೆಗೆ ಉಪ ಪೊಲೀಸ್ ಆಯುಕ್ತರಾದ ಅಡ್ಡೂರು ಶ್ರೀನಿವಾಸಲು, ಐ.ಎ.ಚಂದ್ರಪ್ಪ , ಸಹಾಯಕ ಪೊಲೀಸ್ ಆಯುಕ್ತರಾದ ಗೀತಾ ಬೇನಾಳ ಅವರ ಮಾರ್ಗದರ್ಶನದಲ್ಲಿ ಬ್ರಹ್ಮಪುರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಸಚಿನ್ ಎಸ್.ಚಲವಾದಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಶಿವಪ್ರಕಾಶ, ಕೇಶುರಾಯ, ರಾಮು ಪವಾರ, ಸಂತೋಷಕುಮಾರ, ನವೀನಕುಮಾರ, ಕಲ್ಯಾಣಕುಮಾರ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.