ಇಬ್ಬರು ಸಿಆರ್‌ಪಿಎಫ್ ಯೋಧರು ಹುತಾತ್ಮ

ನವದೆಹಲಿ,ಏ.೨೭- ಮಣಿಪುರದಲ್ಲಿ ಚುನಾವಣಾ ಕರ್ತವ್ಯದ ನಂತರ ಸಿಆರ್‍ಪಿಎಫ್ ಸಿಬ್ಬಂದಿ ನೆಲೆಸಿದ್ದ ಭಾರತೀಯ ರಿಸರ್ವ್ ಪೊಲೀಸ್ ಬೆಟಾಲಿಯನ್ ಶಿಬಿರದ ಮೇಲೆ ಉಗ್ರರು ಬಾಂಬ್ ದಾಳಿ ನಡೆಸಿದ ಪರಿಣಾಮ ಬಿಷ್ಣುಪುರ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಇಬ್ಬರು ಸಿಆರ್‍ಪಿಎಫ್ ಯೋಧರು ಹುತಾತ್ಮರಾಗಿದ್ದು,ಮತ್ತಿಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ಮೃತಪಟ್ಟವರನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ೧೨೮ ಬೆಟಾಲಿಯನ್‌ಗೆ ಸೇರಿದವರು.ಸಿಆರ್‍ಪಿಎಫ್ ಸಬ್-ಇನ್‌ಸ್ಪೆಕ್ಟರ್ ಎನ್ ಸರ್ಕಾರ್ ಮತ್ತು ಹೆಡ್ ಕಾನ್‌ಸ್ಟೆಬಲ್ ಅರುಪ್ ಸೈನಿ ಎಂದು ಗುರುತಿಸಲಾಗಿದೆ. ಗಾಯಗೊಂಡವರು ಇನ್ಸ್ ಪೆಕ್ಟರ್ ಜಾದವ್ ದಾಸ್ ಮತ್ತು ಕಾನ್ ಸ್ಟೇಬಲ್ ಅಫ್ತಾಬ್ ದಾಸ್ ಎಂದು ಭದ್ರತಾ ಸಿಬ್ಬಂಧಿ ಮಾಹಿತಿ ನೀಡಿದೆ
ಮೂಲಗಳ ಪ್ರಕಾರ, ಉಗ್ರರ ಗುಂಪು ನರನ್‌ಸೇನಾ ಗ್ರಾಮದ ಬೆಟ್ಟದಿಂದ ಕಣಿವೆ ಪ್ರದೇಶದ ಕಡೆಗೆ ಕೇಂದ್ರ ಭದ್ರತಾ ಪಡೆಯ ಶಿಬಿರವನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದು ಈ ವೇಳೆ ದುರ್ಘಟನೆ ನಡೆದಿದೆ.ಶಿಬಿರದ ಮೇಲೆ ಉಗ್ರರು ಬಾಂಬ್ ಸ್ಫೋಟಿಸಿದ್ದಾರೆ. ಈ ವೇಳೆ ನಾಲ್ವರು ಸಿಬ್ಬಂದಿಗೆ ತೀವ್ರ ಗಾಯಗಳಾಗಿದ್ದು ಎಲ್ಲರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಯಿತಾದರೂ ಇಬ್ಬರು ಭದ್ರತಾ ಸಿಬ್ಬಂಧಿ ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಗ್ರರು ದಾಳಿಕೋರರು ಮಧ್ಯರಾತ್ರಿಯಿಂದ ದಾಳಿ ನಡೆಸಿದ್ದು ಮುಂಜಾನೆಯಲ್ಲಿ ಈ ಘಟನೆ ವರದಿಯಾಗಿದೆ.
ಈ ಶಿಬಿರ ಬೆಟ್ಟಗಳಿಂದ ೨ ಕಿಲೋಮೀಟರ್ ದೂರದಲ್ಲಿದೆ. ಶಿಬಿರದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಮೇಲ್ ಕಾಲುವೆ ಎಂದು ಕರೆಯಲ್ಪಡುವ ಪ್ರದೇಶವಿದೆ, ಕಳೆದ ವರ್ಷ ಮೇನಲ್ಲಿ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಅದನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಕೇಂದ್ರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು.
ಬೆಟ್ಟಗಳಲ್ಲಿನ ಬಂಡುಕೋರರು ಶಿಬಿರದ ಮೇಲೆ ದಾಳಿ ಮಾಡಲು “ಪಂಪಿ ಗನ್” ಎಂಬ ಕಚ್ಚಾ ಫಿರಂಗಿ ಶಸ್ತ್ರಾಸ್ತ್ರವನ್ನು ಬಳಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ
೨೦೨೩ರ ಆಗಸ್ಟ್ ಮತ್ತು ಸೆಪ್ಟೆಂಬರ್‍ನಲ್ಲಿ ನರನ್‌ಸೇನಾ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮೈಟೆಯಿ ಮತ್ತು ಕುಕಿ-ಜೊ ಸಶಸ್ತ್ರ ಗುಂಪುಗಳ ನಡುವೆ ಭಾರೀ ಗುಂಡಿನ ಚಕಮಕಿಗಳು ನಡೆದಿತ್ತು. ಎರಡೂ ಕಡೆಯವರು ತಮ್ಮನ್ನು “ಗ್ರಾಮ ರಕ್ಷಣಾ ಸ್ವಯಂಸೇವಕರು” ಎಂದು ಕರೆದುಕೊಳ್ಳುತ್ತಿದ್ದು ಅವರ ಕೈವಾಡವಿದೆಯೇ ಅಥವಾ ಬೇರೆ ಉಗ್ರ ಸಂಘಟನೆಯ ಕೈವಾಡವಿದೆಯೇ ಎನ್ನುವುದು ಇನ್ನಷ್ಟೇ ತಿಳಿಯಬೇಕಾಗಿದೆ.