ಇಬ್ಬರು ಸಾಧಕರಿಗೆ ಪ್ರತಿಷ್ಠಿತ ನಾಡೋಜ ಗೌರವ ಪ್ರದಾನ 365 ವಿದ್ಯಾರ್ಥಿಗಳಿಗೆ ಪಿಎಚ್‍ಡಿ ಪ್ರದಾನ

ಹೊಸಪೇಟೆ ಏ10: ಹಂಪಿ ಕನ್ನಡ ವಿಶ್ವವಿದ್ಯಾಲಯದ 29 ನೇ ಘಟಿಕೋತ್ಸವದಲ್ಲಿ ಇಬ್ಬರು ಸಾಧಕರಿಗೆ ಶುಕ್ರವಾರ ನಾಡೋಜ ಗೌರವ ಪದವಿ ಪ್ರದಾನ ಮಾಡಲಾಯಿತು.
ಕನ್ನಡ ವಿಶ್ವವಿದ್ಯಾಲಯದ ಬಯಲುರಂಗ ಮಂದಿರದಲ್ಲಿ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ರಾಜ್ಯಪಾಲ ವಾಝುಬಾಯಿ ರೋಡಬಾಯಿ ವಾಲಾ ಅವರ ಅನುಪಸ್ಥಿತಿಯಲ್ಲಿ ಕುಲಪತಿ ಡಾ.ಸ.ಚಿ.ರಮೇಶ ಅವರು, ವಿಜಾಪುರ ಜಿಲ್ಲೆಯ ಹೊನ್ನಡವಾಡ ಗ್ರಾಮದ ಉದ್ಯಮಿ ಜಗದೀಶ ಎಸ್.ಗುಡಗುಂಟಿ ಹಾಗೂ ಉಡುಪಿಯ ನೇತ್ರ ತಜ್ಞ ಡಾ.ಕೆ.ಕೃಷ್ಣಪ್ರಸಾದ್ ಇವರಿಗೆ ಗೌರವ ನಾಡೋಜ ಪ್ರದಾನ ಮಾಡಿದರು.
ಚಲನಚಿತ್ರ ಸಂಗೀತ ನಿರ್ದೇಶಕ ವಿ.ನಾಗೇಂದ್ರ ಪ್ರಸಾದ್ ಸೇರಿದಂತೆ ಹತ್ತು ಜನರಿಗೆ ಡಿಲಿಟ್ ಪದವಿ ಮತ್ತು 365 ಜನ ವಿದ್ಯಾರ್ಥಿಗಳಿಗೆ ಪಿಎಚ್‍ಡಿ ಪದವಿ ಪ್ರದಾನ ಮಾಡಲಾಯಿತು. ಕುಲಸಚಿವ ಸುಬ್ಬಣ್ಣ ರೈ ಸ್ವಾಗತ ಭಾಷಣ ಮಾಡಿದರು. ಡೀನ್‍ರಾದ ಡಾ.ರವೀಂದ್ರ ನಾಥ ಹಾಗೂ ಡಾ.ಸೋಮಶೇಖರ ನಾಡೋಜ ಪುರಸ್ಕೃತರನ್ನು ಪರಿಚಯಿಸಿದರು. ವಿವಿಧ ನಿಕಾಯದ ಡೀನ್ ಇತರೆ ಗಣ್ಯರು ಹಾಜರಿದ್ದರು. ಆರಂಭದಲ್ಲಿ ಗಣ್ಯರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಯಿತು.