ರಾಯಚೂರು,ಜೂ.೧೭-
ಜಿಲ್ಲಾಡಳಿತ, ದೇವದುರ್ಗ ತಾಲೂಕ ಆಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಪೊಲೀಸ್ ಇಲಾಖೆ ರವರ ಸಂಯೋಗದಲ್ಲಿ ದೇವದುರ್ಗ ತಾಲೂಕು ವ್ಯಾಪ್ತಿಯ ವಿವಿಧ ಹೋಟೆಲ್, ಗ್ಯಾರೇಜ್, ಬೇಕರಿ, ಅಂಗಡಿ, ಬಾರ್& ರೆಸ್ಟೋರೆಂಟ್, ಡಾಬಾ, ಇಟ್ಟಿಗೆ ಭಟ್ಟಿ ಮತ್ತು ಇನ್ನಿತರೆ ವಾಣಿಜ್ಯ ಉದ್ದಿಮೆಗಳಲ್ಲಿ ತಪಾಸಣೆ ಕೈಗೊಂಡಾಗ, ೧೪ ವರ್ಷದೊಳಗಿನ ಇಬ್ಬರು ಮಕ್ಕಳು ಶಿವ ಪುಟ್‌ವೇರ್ ಶಾಪ್”ನಲ್ಲಿ ಕೆಲಸ ಮಾಡುತ್ತಿರುವುದು ಕಂಡುಬಂದಿದ್ದು, ಮಕ್ಕಳನ್ನು ೬ನೇ ತರಗತಿಗೆ ದಾಖಲು ಮಾಡಲಾಯಿತು. “ಶಿವ ಪುಟ್‌ವೇರ್ ಶಾಪ್”ನ ಮಾಲೀಕರ ವಿರುದ್ಧ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಯಿತು.
ದಾಳಿಯ ತಂಡದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮಂಜುನಾಥರೆಡ್ಡಿ, ಕಾರ್ಮಿಕ ನಿರೀಕ್ಷಕ ಶಾಂತಮೂರ್ತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಹನುಮೇಶ, ಸಿಆರ್‌ಪಿ ಮೌನೇಶ, ಶಿಕ್ಷಣ ಇಲಾಖೆಯ ಅಧಿಕಾರಿ ರಾಜನಗೌಡ, ಗ್ರಾಮ ಆಡಳಿತ ಅಧಿಕಾರಿ ಬಾವಾಸಾಬ ಸೇರಿದಂತೆ ಇನ್ನಿತರರು ಇದ್ದರು.
ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ ೨೦೧೬ ರಂತೆ ೧೪ ವರ್ಷದೊಳಗಿನ ಮಕ್ಕಳ ದುಡಿಮೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಹಾಗೂ ೧೫ ರಿಂದ ೧೮ ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಒಂದು ವೇಳೆ ದುಡಿಸಿಕೊಂಡಲ್ಲಿ ರೂ. ೫೦,೦೦೦/- ದಂಡ ಹಾಗೂ ೨ ವರ್ಷ ಜೈಲು ಶಿಕ್ಷೆ ಇರುತ್ತದೆ. ವಾಹನಗಳಲ್ಲಿ ಮಕ್ಕಳನ್ನು ಕೃಷಿ ಚಟುವಟಿಕೆಗಳಿಗಾಗಿ ಅಕ್ರಮ ಮತ್ತು ಕಾನೂನು ಬಾಹಿರವಾಗಿ ಸಾಗಾಣಿಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.