ಇಬ್ಬರು ಪತ್ರಕರ್ತರನ್ನು ಕಳೆದುಕೊಂಡು ಬಡವರಾಗಿದ್ದೇವೆ: ಗಣಪತಿ

ಬೀದರ್: ಆ.17:ಜಿಲ್ಲೆಯ ಇಬ್ಬರು ಹಿರಿಯ ಪತ್ರಕರ್ತರು ಅಕಾಲಿಕವಾಗಿ ನಿಧನರಾಗಿದ್ದು ಅವರ ಅಗಲಿಕೆ ಇಡೀ ಪತ್ರಕರ್ತರ ಸಮೂಹಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ ಗಣಪತಿ ಹೇಳಿದರು.

ಇಂದು ನಗರದ ಪತ್ರಿಕಾ ಭವನದಲ್ಲಿ ಇತ್ತಿಚೀಗೆ ಅಕಾಲಿಕ ಸಾವನ್ನಪ್ಪಿದ ಹೈದ್ರಾಬಾದ್ ಕರ್ನಾಟಕ ಉರ್ದು ದಿನಪತ್ರಿಕೆಯ ಸಂಪಾದಕ ಅಬ್ದುಲ್ ಸಮದ್ ಹಾಗೂ ಸುವರ್ಣಾ ಟಿ.ವಿ ವಾಹಿನಿಯ ಛಾಯಾಗ್ರಾಹಕ ಹಣಮಂತರಾಯ ಬಬಲಾದಿ ಅವರಿಗಾಗಿ ಎರ್ಪಡಿಸಿದ ಶೃದ್ಧಾಂಜಲಿ ನುಡಿನಮನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿರುವ ಅವರು, ಇಬ್ಬರು ಪತ್ರಕರ್ತರ ಕುಟುಂಬಕ್ಕೆ ಸಂಘ ಸಾಂತ್ವನ ಸಲ್ಲಿಸುವುದರ ಜೊತೆಗೆ ಮುಖ್ಯಮಂತ್ರಿಗಳ ವಿಶೇಷ ಪರಿಹಾರ ನಿಧಿಯಲ್ಲಿ ವಿಶೇಷ ಅನುದಾನ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಪ್ರತಿನಿಧಿ ಮಾಳಪ್ಪ ಅಡಸಾರೆ ಮಾತನಾಡಿ, ಪತ್ರಕರ್ತರಿಗೆ ಯಾವ ಬೆಲೆಬಾಳುವ ಆಸ್ತಿ ಇರುವುದಿಲ್ಲ. ನೌಕರರು, ಗುತ್ತಿಗೆದಾರರು ಹಾಗೂ ಉದ್ದಿಮೆದಾರರು ತಮ್ಮ ಕುಟುಂಬಕ್ಕಾಗಿ ಏನಾದರೂ ಹಣ ಗಳಿಕೆ ಮಾಡಿಟ್ಟಿರುತ್ತಾರೆ. ಆದರೆ, ಪತ್ರಕರ್ತರಿಗೆ ಕಡಿಮೆ ಸಂಬಳದಲ್ಲಿ ದುಡಿಯುವ ಅನಿವಾರ್ಯತೆ ಇರುತ್ತದೆ. ಆದ್ದರಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ತಗಡೂರು ಅವರನ್ನೊಳಗೊಂಡ ಜಿಲ್ಲೆಯ ನಿಯೋಗ ತೆಗೆದುಕೊಂಡು ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಮುಖ್ಯಮಂತ್ರಿಗಳಿಗೆ ತಲಾ ರು.25 ಲಕ್ಷ ಪರಿಹಾರಕ್ಕೆ ಬೇಡಿಕೆ ಇಡಲಾಗುವುದೆಂದರು.

ಹಿರಿಯ ಪತ್ರಕರ್ತ ಗಂಧರ್ವ ಸೇನಾ ಮಾತನಾಡಿ, ಪತ್ರಕರ್ತರು ಇದ್ದಾಗ ಮಾತ್ರ ಸಮಾಜ ಗೌರವಿಸುತ್ತದೆ. ಆದರೆ, ಅವರು ಸತ್ತಾಗ ಯಾರು ಕೈಹಿಡಿಯುದಿಲ್ಲ. ಹಾಗಾಗಿ ಅವರ ಕುಟುಂಬದ ನೆರವಿಗೆ ನಾವೆಲ್ಲ ಕೈಲಾದಷ್ಟು ಧನ ಸಂಗ್ರಹಿಸಿ ಕೊಡೋಣ ಎಂದರು.

ಪತ್ರಕರ್ತ ಮಲ್ಲಿಕಾರ್ಜುನ್ ಮರಕಲೆ ಮಾತನಾಡಿ, ಪತ್ರಕರ್ತರ ಜೀವನ ಇಂದು ಅತ್ಯಂತ ದುಸ್ತರವಾಗಿದ್ದು, ಸ್ಪರ್ಧಾತ್ಮಕ ಯುಗದಲ್ಲಿ ಪತ್ರಕರ್ತರು ಎಲ್ಲ ಸವಾಲುಗಳನ್ನು ಎದುರಿಸಬೇಕಾಗಿದೆ. ಸಂಕಷ್ಟದಲ್ಲಿರುವ ಎಲ್ಲ ಸಮಾಜಗಳಿಗೆ ಸುದ್ದಿ ಮೂಲಕ ಗುರ್ತಿಸುವ ಕಾರ್ಯ ಮಾಧ್ಯಮ ರಂಗ ಮಾಡುವುದರಿಂದ ಜಿಲ್ಲೆಯ ಎಲ್ಲ ಸಮಾಜಗಳು ಅಗಲಿದ ನಮ್ಮ ಈ ಇಬ್ಬರು ಸಹುದ್ಯೋಗಿಗಳಿಗೆ ಅನುದಾನ ಸಹಾಯಹಸ್ತ ಚಾಚಬೇಕೆಂದು ಕರೆ ನೀಡಿದರು.

ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಸದಸ್ಯರಾದ ಅಪ್ಪಾರಾವ ಸೌದಿ ಮಾತನಾಡಿ, ಸಂಕಷ್ಟದಲ್ಲಿರುವ ಪತ್ರಕರ್ತರ ಮಕ್ಕಳಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಜಿಲ್ಲೆಯ ಪ್ರಮುಖ ಆಸ್ಪತ್ರೆಗಳು ಉಚಿತ ಶಿಕ್ಷಣ ನೀಡಲು ಮುಂದೆ ಬರಬೇಕು ಹಾಗೂ ಶಿಕ್ಷಣ ಸಂಸ್ಥೆಗಳು ಸಂಕಷ್ಟದಲ್ಲಿರುವ ಪತ್ರಕರ್ತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮುಂದೆ ಬರಬೇಕೆಂದು ಕರೆ ನೀಡಿದರು.

ಪತ್ರಕರ್ತರಾದ ಶಶಿ ಶಂಬೆಳ್ಳಿ, ವಿರುಪಾಕ್ಷ ಗಾದಗಿ, ಅಬ್ದುಲ್ ಅಲಿ ಹಾಗೂ ಇತರರು ಮಾತನಾಡಿದರು. ಪತ್ರಕರ್ತರಾದ ಅಬ್ದುಲ್ ಖದೀರ್, ಭೀಮರಾವ ಬುರಾನಪುರ, ಓಂಕಾರ ಮಠಪತಿ, ಲಿಂಗೇಶ ಮರಕಲೆ, ಸಂಜುಕುಮಾರ ಬುಕ್ಕಾ, ಶ್ರೀನಿವಾಸ ಚೌದ್ರಿ, ಸುಮಿಲ ಕುಲಕರ್ಣಿ, ಆನಿಲ ದೇಶಮುಖ, ಉದಯ ಜೀರ್ಗೆ, ಸುನಿಲ ಹೊನ್ನಾಳೆ, ಸಂತೋಷ ಚಟ್ಟಿ ಸೇರಿದಂತೆ ಹಲವರು ಶೃದ್ದಾಂಜಲಿ ಸಭೆಯಲ್ಲಿ ಭಾಗಿಯಾದರು.

ಆರಂಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾಯ್ದರ್ಸಿ ಶಿವಕುಮಾರ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ನಾಗಶೆಟ್ಟಿ ಧರಂಪುರ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಥ್ವಿರಾಜ.ಎಸ್ ವಂದಿಸಿದರು.