
ಬೆಂಗಳೂರು, ಮಾ.೩೦- ಬಾರ್, ರೆಸ್ಟೋರೆಂಟ್ ಗಳಿಂದ ರೂಮ್ ಗಳಿಗೆ ಬೀಡುವಂತೆ ಕೇಳುವವರನ್ನು ಗುರಿಯಾಗಿಸಿಕೊಂಡು ಆಟೋದಲ್ಲಿ ಹತ್ತಿಸಿಕೊಂಡು ರಾತ್ರಿ ವೇಳೆ ಕತ್ತಲಿರುವ ಸ್ಥಳಗಳಿಗೆ ಕರೆದೊಯ್ದು ಸುಲಿಗೆ ಮಾಡುತ್ತಿದ್ದ ಇಬ್ಬರು ಖದೀಮರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನದೀಂ ಹಾಗೂ ಅಲ್ಲಾಭಕ್ಷ್ ಬಂಧಿತ ಆರೋಪಿಗಳಾಗಿದ್ದು ಅವರಿಂದ ಎರಡು ಮೊಬೈಲ್ ಗಳು, ೪ ಸಾವಿರ ನಗದು ಸೇರಿ ಒಟ್ಟು ೧.೧೦ ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಲಾಗಿದೆ ಎಂದು ಡಿಸಿಪಿ ಲಕ್ಷ್ಮಣ ನಿಂಬರಗಿ ಅವರು ತಿಳಿಸಿದ್ದಾರೆ.
ಉಪ್ಪಾರಪೇಟೆಯ ಬಾರ್, ರೆಸ್ಟೋರೆಂಟ್ ಗಳ ಬಳಿ ರಾತ್ರಿ ವೇಳೆ ಆಟೋ ನಿಲ್ಲಿಸಿಕೊಂಡು ನಿಂತಿರುತ್ತಿದ್ದ ಬಂಧಿತ ಆರೋಪಿಗಳು ಮದ್ಯಪಾನ ಮಾಡಿ ರೂಮ್ ಗಳಿಗೆ ಬೀಡುವಂತೆ ಕೇಳುವವರನ್ನು ಆಟೋದಲ್ಲಿ ಕೂರಿಸಿಕೊಂಡು ಕತ್ತಲಿರುವ ಸ್ಥಳಗಳಿಗೆ ಕರೆದೊಯ್ದು ಬೆದರಿಸಿ ನಗದು ಮೊಬೈಲ್ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದರು.
ಉಪ್ಪಾರಪೇಟೆಯಿಂದ ಬಾರ್ ವೊಂದರಿಂದ ರೂಮ್ ಗೆ ಹೋಗಲು ಆಟೋ ಕೇಳಿದ ವ್ಯಕ್ತಿಯೊಬ್ಬರನ್ನು ಕೂರಿಸಿಕೊಂಡು ಬೆದರಿಸಿ
ನಗದು,ಮೊಬೈಲ್ ಇತರೆ ದಾಖಲಾತಿಗಳನ್ನು ದೋಚಿ ಪರಾರಿಯಾಗಿದ್ದ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಉಪ್ಪಾರಪೇಟೆ ಪೊಲೀಸ್ ಇನ್ಸ್ ಪೆಕ್ಟರ್ ವಸಂತ್ ಮತ್ತವರ ಸಿಬ್ಬಂದಿ ಖಚಿತವಾದ ಮಾಹಿತಿಯನ್ನು ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.