ಇಬ್ಬರು ಕುಖ್ಯಾತ ಸರಗಳ್ಳರ ಸೆರೆ

ಬೆಂಗಳೂರು,ಫೆ.೧೫-ರೈಲುಗಳಲ್ಲಿ ಮಹಿಳೆಯರ ಚಿನ್ನದ ಸರ ದೋಚುತ್ತಿದ್ದ ಇಬ್ಬರು ಕುಖ್ಯಾತ ಸರಗಳ್ಳರನ್ನು ದಂಡು ರೈಲ್ವೇ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಗಾರಪೇಟೆಯ ದೇಶಿಹಳ್ಳಿಯ ಕೆ.ಬಾಲಾಜಿ (೨೪)ಕಮಲನಾಥನ್ ಎಸ್.ಕೆ(೪೨) ಬಂಧಿತ ಸರಗಳ್ಳರಾಗಿದ್ದು,ಇಬ್ಬರಿಂದ ೪,೩೪,೫೦೦ ಮೌಲ್ಯದ ೧೨೯ ಗ್ರಂ ತೂಕದ ಚಿನ್ನದ ಸರಗಳನ್ನು ಜಪ್ತಿ ಮಾಡಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ರೈಲ್ವೆ ಎಸ್ ಪಿ ಡಾ.ಸೌಮ್ಯಲತಾ ತಿಳಿಸಿದ್ದಾರೆ.
ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದ ಚೆನ್ನೈ ಹಾಗೂ ಕೆಜಿಎಫ್ ಮೂಲದ ಇವರಿಬ್ಬರೂ ಸ್ನೇಹಿತರಾಗಿದ್ದರು.ಆರೋಪಿ ಕಮಲನಾಥ ಕೈ ತುಂಬಾ ಸಾಲ ಮಾಡಿಕೊಂಡು ಸಾಲ ತೀರಿಸಲು ಸರಗಳವು ಮಾಡಲು ಸ್ನೇಹಿತನಾದ ಮತ್ತೊಬ್ಬ ಆರೋಪಿ ಬಾಲಾಜಿ ಗೆ ಕೇಳಿಕೊಂಡಾಗ ಆತ ಒಪ್ಪಿಕೊಂಡಿದ್ದು ಇಬ್ಬರು ಸೇರಿ ರೈಲುಗಳಲ್ಲಿ ಕಳವು ಮಾಡುತ್ತಿದ್ದರು.
ಆರೋಪಿ ಕಮಲನಾಥ ತೋರಿಸಿದ ಮಹಿಳೆಯರ ಕತ್ತಿನಲ್ಲಿದ್ದ ಬಂಗಾರದ ಸರಗಳನ್ನು ರೈಲುಗಾಡಿಯು ನಿಧಾನವಾಗಿ ಚಲಿಸುವಾಗ ಬಾಲಾಜಿಯು ಕಿತ್ತುಕೊಂಡು ರೈಲಿನಿಂದ ಧುಮುಕಿ ಓಡಿಹೋಗುತ್ತಿದ್ದು. ನಂತರ ಅವುಗಳನ್ನು ಇಬ್ಬರೂ ಸೇರಿ ಮಾರಾಟ ಮಾಡುವುದು ವಿಚಾರಣೆಯಲ್ಲಿ ತಿಳಿದು ಬಂದಿದೆ.
ಕಳೆದ ಜ.೧೮ ರಂದು ಕುಪ್ಪಂನ ಸುಮಿತ್ರಾರವರು ಬಂಗಾರಪೇಟೆ ರೈಲ್ವೇ ನಿಲ್ದಾಣದಿಂದ ಕುಪ್ಪಂ ಗೆ ಬೆಂಗಳೂರು-ಜೋಲಾರಪೇಟೆ ಪುಷ್ಪುಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಬೆಳಿಗ್ಗೆ ೧೧:೩೦ ಗಂಟೆಗೆ ಬಿಸಾನತ್ತಂ ರೈಲು ನಿಲ್ದಾಣದಲ್ಲಿ ರೈಲುಗಾಡಿಯು ನಿಂತು, ಪುನಃ ನಿಧಾನವಾಗಿ ಚಲಿಸಲು ಪ್ರಾರಂಭಿಸಿದಾಗ ಅವರ ಕತ್ತಿನಲ್ಲಿದ್ದ ೨೯ ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ಕಸಿದು ರೈಲಿನಿಂದ ಧುಮಿಕಿ ಓಡಿ ಹೋದ ಬಗ್ಗೆ ಬಂಗಾರಪೇಟೆ ರೈಲ್ವೇ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಆರೋಪಿತರ ಪತ್ತೆಗಾಗಿ ದಂಡು ರೈಲ್ವೆ ವೃತ್ತದ ಪೊಲೀಸ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ರಚಿಸಿದ್ದ ವಿಶೇಷ ತಂಡವು ಕಾರ್ಯಾಚರಣೆ ಕೈಗೊಂಡು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಕಾರ್ಯಾಚರಣೆ ನಡೆಸಿದ ತಂಡವನ್ನು ರೈಲ್ವೆ ಡಿಐಜಿಪಿ ಡಾ.ಎಸ್.ಡಿ.ಶರಣಪ್ಪ, ಅವರು ಅಭಿನಂದಿಸಿದ್ದಾರೆ.