ಇಬ್ಬರು ಕುಖ್ಯಾತ ಕಳ್ಳರ ಸೆರೆ 5 ಲಕ್ಷ 60 ಸಾವಿರ ಮಾಲು ವಶ

ಬೆಂಗಳೂರು,ಏ.೭- ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕನ್ನಗಳವು ಮಾಡುತ್ತಿದ್ದ ಕುಖ್ಯಾತ ಕನ್ನಗಳ್ಳನನ್ನು ಬಂಧಿಸಿರುವ ವಿಜಯನಗರ ಉಪವಿಭಾಗದ ಪೊಲೀಸರು ೪ ಲಕ್ಷ ೮೫ ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.


ಅಂಜನಾದ್ರಿನಗರದ ಪ್ರಶಾಂತ್ (೨೧) ಬಂಧಿತ ಆರೋಪಿಯಾಗಿದ್ದು, ಆತನಿಂದ ೪ ಲಕ್ಷ ೮೫ ಸಾವಿರ ಮೌಲ್ಯದ ೭೭ ಗ್ರಾಂ ಚಿನ್ನ, ೨ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಸಂಜೀವ್‌ಪಾಟೀಲ್ ತಿಳಿಸಿದ್ದಾರೆ.
ಮಾಗಡಿ ರಸ್ತೆಯ ಮನೆಗೆ ಬೀಗ ಹಾಕದೆ ಕೆಲಸಕ್ಕೆ ಹೋಗುವ ಆತುರದಲ್ಲಿ ಹೋಗಿದ್ದ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿ ೧೫ ಸಾವಿರ ನಗದು, ೧೭ ಗ್ರಾಂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ. ಈ ಸಂಬಂಧ ದಾಖಲಾಗಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಸಿಪಿ ನಂಜುಂಡೇಗೌಡರ ನೇತೃತ್ವದಲ್ಲಿ ರಚಿಸಿದ ವಿಶೇಷ ತಂಡವು ಕಾರ್ಯಾಚರಣೆ ಕೈಗೊಂಡು ಖಚಿತ ಮಾಹಿತಿಯಾಧರಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಯು ಮಾಗಡಿ ರಸ್ತೆ, ಬ್ಯಾಡರಹಳ್ಳಿ, ಕೆಪಿ ಅಗ್ರಹಾರದಲ್ಲಿ ಮನೆಗೆ ನುಗ್ಗಿ ಚಿನ್ನಾಭರಣಗಳನ್ನು ಕಳವು ಮಾಡಿರುವುದಲ್ಲದೆ ಸುಬ್ರಮಣ್ಯನಗರ, ಮಹಾಲಕ್ಷ್ಮಿ ಲೇಔಟ್‌ನಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಆರೋಪಿಯ ಬಂಧನದಿಂದ ೪ ಮನೆಗಳವು, ೨ ದ್ವಿಚಕ್ರ ವಾಹನಕಳವು ಪತ್ತೆಯಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಮೊಬೈಲ್ ಕಳ್ಳನ ಸೆರೆ
ವಿಜಯನಗರ ಪೊಲೀಸರು ಮೊಬೈಲ್ ಕಳವು ಮಾಡುತ್ತಿದ್ದ ನೆಲಮಂಗಲದ ಮೊಹ್ಮದ್ ಸೂಫಿಯಾನ್ (೨೦)ನನ್ನು
ಬಂಧಿಸಿ ೭೫ ಸಾವಿರ ಮೌಲ್ಯದ ೫ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಸ್ಕೂಟರ್ ಕಳವು ಮಾಡಿ ಅದರಲ್ಲಿ ಸಂಚರಿಸುತ್ತ ನಿರ್ಜನ ಪ್ರದೇಶಗಳಲ್ಲಿ ಸಂಚರಿಸುವವರನ್ನು ಹಿಂಬಾಲಿಸಿ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ.
ವಿಜಯನಗರ ೯ನೇ ಮುಖ್ಯರಸ್ತೆಯ ಪತ್ನಿ ಜತೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೊಬೈಲ್ ಕಸಿದು ಪರಾರಿಯಾಗಿದ್ದ ಪ್ರಕರಣವನ್ನು ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸಂಜೀವ್ ಪಾಟೀಲ್ ತಿಳಿಸಿದ್ದಾರೆ.