ಇಬ್ಬರು ಕಳ್ಳಿಯರ ಬಂಧನ: 3 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಜಪ್ತಿ

ಕಲಬುರಗಿ,ನ.24-ಇಬ್ಬರು ಕಳ್ಳಿಯರನ್ನು ಬಂಧಿಸಿರುವ ಬ್ರಹ್ಮಪುರ ಪೊಲೀಸರು 3 ಲಕ್ಷ ರೂ.ಮೌಲ್ಯದ 60 ಗ್ರಾಂ.ಬಂಗಾರದ ಆಭರಣ ಜಪ್ತಿ ಮಾಡಿದ್ದಾರೆ.
ಮಿಲ್ಲತ್ ನಗರದ ತಾಹಿರಾ ಬೇಗಂ (46) ಹಾಗೂ ಶಹಾಬಾದ ಲೋಹರ ಗಲ್ಲಿಯ ಪರ್ವಿನ್ ಬೇಗಂ (29) ಎಂಬುವವರನ್ನು ಬಂಧಿಸಿ 1 ಲಕ್ಷ ರೂ.ಮೌಲ್ಯದ 20 ಗ್ರಾಂ.ಬಂಗಾರದ ಸರ, 1.50 ಲಕ್ಷ ರೂ.ಮೌಲ್ಯದ 30 ಗ್ರಾಂ.ಬಂಗಾರದ ಸಿಂಗಾರ ಸರ ಹಾಗೂ 50 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಚೈನ್ ಸೇರಿದಂತೆ ಒಟ್ಟು 3 ಲಕ್ಷ ರೂ.ಮೌಲ್ಯದ 60 ಗ್ರಾಂ.ಬಂಗಾರದ ಆಭರಣ ಜಪ್ತಿ ಮಾಡಿ ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಗರದ ಸರಾಫ್ ಬಜಾರ್‍ದಲ್ಲಿ ತಮ್ಮ ವ್ಯಾನಿಟಿ ಬ್ಯಾಗ್‍ನಲ್ಲಿದ್ದ 1 ಲಕ್ಷ ರೂ.ಮೌಲ್ಯದ 20 ಗ್ರಾಂ.ಬಂಗಾರದ ಗುಂಡಿನ ಸರ, 1.50 ಲಕ್ಷ ರೂ.ಮೌಲ್ಯದ 30 ಗ್ರಾಂ.ಬಂಗಾರದ ಸಿಂಗಾರ ಸರ ಕಳವು ಮಾಡಲಾಗಿದೆ ಎಂದು ಮಹಿಳೆಯೊಬ್ಬರು ನ.19 ರಂದು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ, ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಬ್ರಹ್ಮಪುರ ಪೊಲೀಸ್ ಠಾಣೆಯ ಪಿ.ಐ.ಸಚಿನ್ ಚಲವಾದಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸವಿತಾ, ಜ್ಯೋತಿ, ತಾತ್ವೀಕಾ ಪಾಟೀಲ, ಅಪರಾಧ ವಿಭಾಗದ ಸಿಬ್ಬಂದಿಗಳಾದ ಶಿವಪ್ರಕಾಶ, ಸಂತೋಷ, ಕಲ್ಯಾಣಕುಮಾರ, ರಾಮು ಪವಾರ್ ಅವರು ತನಿಖೆ ನಡೆಸಿ ತಾಹಿರಾ ಬೇಗಂ ಹಾಗೂ ಪರ್ವಿನ್ ಬೇಗಂ ಅವರನ್ನು ಬಂಧಿಸಿ ಚಿನ್ನಾಭರಣ ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಯಲ್ಲಿ ಯಶಸ್ವಿಯಾಗಿದ್ದಾರೆ.