ಇಪಿಎಸ್ 95 ನಿವೃತ್ತ ಪಿಂಚಣಿದಾರರಿಂದ ಪ್ರತಿಭಟನೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಜ.22: ಇಪಿಎಸ್ 95 ನಿವೃತ್ತ ಪಿಂಚಣಿದಾರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಸಂಘರ್ಷ ಸಮಿತಿ ಸದಸ್ಯರು ನಗರದ ಕೆಬಿ‌ ಬಡಾವಣೆಯಲ್ಲಿನ ಕಾರ್ಮಿಕ ಮಂತ್ರಾಲಯದ ನೌಕರರ ಭವಿಷ್ಯ ನಿಧಿ ಸಂಸ್ಥೆ ಜಿಲ್ಲಾ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಇಪಿಎಫ್ ಕಛೇರಿ ಮುಂದೆ ಪ್ರತಿಭಟನೆ ನಡೆಸಿದ‌ ನಿವೃತ್ತ ಪಿಂಚಿಣಿದಾರರು ಸ್ಥಳೀಯ ಭವಿಷ್ಯನಿಧಿ ಅಧಿಕಾರಗಳ ಮುಖಾಂತರ ಮನವಿ ಕೊಡುವ ಮುಖಾಂತರ ಕೇಂದ್ರ ಕಾರ್ಮಿಕ ಮಂತ್ರಿಗಳಿಗೆ ಮನವಿ ‌ಸಲ್ಲಿಸಿದರು.ಈ ವೇಳೆ ಮಾತನಾಡಿದ ಸಮಿತಿಯ ‌ಕಾರ್ಯಾಧ್ಯಕ್ಷ ಪುಟಗನಾಳ್ ಟಿ.ಮಂಜುನಾಥ್, ನಮ್ಮ ಬೇಡಿಕೆಗಳಾದ ಕನಿಷ್ಠ ಪಿಂಚಣಿ 7,500ರೂ.,  ತುಟ್ಟಿಭತ್ಯೆ, ವೈದ್ಯಕೀಯ ಸೌಲಭ್ಯ, ವಿಧವೆಯರಿಗೆ ಪೂರ್ಣ ಪಿಂಚಣಿ ವೇತನ, ಪಿಂಚಣಿ ವಂಚಿತರಿಗೆ ಕನಿಷ್ಠ 5,000 ರೂ., ಗಳನ್ನು ಮಂಜೂರು ಮಾಡಬೇಕು.‌ ಈ ನಿಟ್ಟಿನಲ್ಲಿ ‌ಸ್ಥಳೀಯ ಇಪಿಎಫ್ ಅಧಿಕಾರಿಗಳ ಮುಖಾಂತರ ಕೇಂದ್ರ ಕಾರ್ಮಿಕ ಮಂತ್ರಿ ಭೂಪೇಂದ್ರಯಾದವ್‌ ಅವರಿಗೆ ಮನವಿ ಕೊಡಲಾಗಿದೆ. ಕಾರಣ ಕೇಂದ್ರ ಸರ್ಕಾರ ಈ ಕೂಡಲೇ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.ಸಮಿತಿಯ ಸಂಯೋಜಕ ಎಂ.ಶಾಂತಪ್ಪ ಮಾತನಾಡಿ, 20ರಿಂದ 40 ವರ್ಷಗಳ ಕಾಲ ವಿವಿಧ ಸಂಸ್ಥೆಗಳಲ್ಲಿ ‌ಸೇವೆ ಸಲ್ಲಿಸಿರುವ ನಿವೃತ್ತರು ಈ ಹಿಂದೆ ಹಲವು ಬಾರಿ ಪ್ರತಿಭಟನೆ ನಡೆಸಿ ಮನವಿಗಳನ್ನು ಇಪಿಎಫ್ ಇಲಾಖೆ, ಪ್ರಧಾನಮಂತ್ರಿ, ಕಾರ್ಮಿಕ ಮಂತ್ರಿ, ಹಣಕಾಸು ಮಂತ್ರಿಗಳಿಗೂ ಮನವಿ ನೀಡಿದರೂ ಕೂಡ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಕಳೆದ 12ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸಹ ಯಾವುದೇ ಸವಲತ್ತುಗಳನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಕೆ.ಎಂ.ಮರುಳಸಿದ್ಧಯ್ಯ, ಗಂಗಾಧರ, ಮಲ್ಲಿಕಾರ್ಜುನ ತಂಗಡಗಿ, ಡಿ.ಹೆಚ್.ಶೆಟ್ಟರ್ ಸೇರಿದಂತೆ ಬೃಹತ್ ಸಂಖ್ಯೆಯಲ್ಲಿ ನಿವೃತ್ತ ಪಿಂಚಣಿದಾರರು ಇದ್ದರು.