ಇಪಿಎಫ್ ಠೇವಣಿಗಳ ಬಡ್ಡಿ ೮.೧೫ಕ್ಕೆ ಹೆಚ್ಚಳ

ಹೊಸದಿಲ್ಲಿ, ಮಾ.೨೮- ದೇಶದಲ್ಲಿ ೨೦೨೨-೨೩ರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿಯನ್ನು ಶೇ. ೮.೧೫ಕ್ಕೆ ನಿಗದಿ ಮಾಡಿ ಇಪಿಎಫ್ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದೆ.ಬಡ್ಡಿ ದರ ಏರಿಳಿತ ಮಾಡುವ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು -ಸಿಬಿಟಿಯ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ಇಪಿಎಫ್ ಖಾತೆದಾರರಿಗೆ ಅನುಕೂಲವಾಗಲಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತಿಳಿಸಿದೆ.
ಇಫಿಎಫ್ ಬಡ್ಡಿದರ ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡಿರುವುದರಿಂದ ಸುಮಾರು ಐದು ಕೋಟಿ ಚಂದಾದಾರರಿಗೆ ಇಪಿಎಫ್ ಖಾತೆಯ ಬಡ್ಡಿ ದರದಲ್ಲಿ ಶೇ. ೦.೦೫ ರಷ್ಟು ಹೆಚ್ಚಳವಾಗಲಿದೆ.ಸಿಬಿಟಿಯ ನಿರ್ಧಾರದ ನಂತರ, ೨೦೨೨-೨೩ ರ ಇಪಿಎಫ್ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಳದ ಒಪ್ಪಿಗೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಹಣಕಾಸು ಸಚಿವಾಲಯದ ಮೂಲಕ ಸರ್ಕಾರ ಅನುಮೋದಿಸಿದ ನಂತರವೇ ಇಪಿಎಫ್ ಓ ಬಡ್ಡಿದರ ದರ ಅನ್ವಯವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.ಕಳೆದ ವರ್ಷ, ಇಪಿಎಫ್ ಖಾತೆಯ ಬಡ್ಡಿ ದರ ೨೦೨೧- ೨೨ ಕ್ಕೆ ಶೇ.೮.೧ ಇತ್ತು. ಇದು ನಾಲದು ದಶಕಗಳ ಕಡಿಮೆ ಎಂದು ಹೇಳಲಾಗಿತ್ತು. ಹೀಗಾಗಿ ೨೦೨೨-೨೩ ನೇ ಸಾಲಿಗೆ ಬಡ್ಡಿದರ ಹೆಚ್ಚಳ ಮಾಡಲಾಗಿದೆ.ಇಪಿಎಫ್ ಒ ಸಾಮಾಜಿಕ ಭದ್ರತಾ ಸಂಸ್ಥೆಯಾಗಿದ್ದು, ದೇಶದ ಸಂಘಟಿತ ಉದ್ಯೋಗಿಗಳಿಗೆ ಭವಿಷ್ಯ, ಪಿಂಚಣಿ ಮತ್ತು ವಿಮಾ ನಿಧಿಗಳ ರೂಪದಲ್ಲಿ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಒದಗಿಸುವ ಜವಾಬ್ದಾರಿ ಹೊಂದಿದೆ.೧೯೯೫ ರ ಪಿಂಚಣಿ ಯೋಜನೆ ಚಂದಾದಾರರಿಗೆ ಹೆಚ್ಚಿನ ಪಿಂಚಣಿ ಆಯ್ಕೆ ಮಾಡಲು ಇಪಿಎಫ್‌ಒ ತೆಗೆದುಕೊಂಡ ಕ್ರಮದ ಬಗ್ಗೆಯೂ ಟ್ರಸ್ಟಿಗಳು ಚರ್ಚಿಸುತ್ತಾರೆ.
ಉದ್ಯೋಗಿಗಳಿಗೆ ನಾಲ್ಕು ತಿಂಗಳ ಕಾಲಾವಕಾಶ ನೀಡಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ ಇಪಿಎಫ್ ಒತನ್ನ ಚಂದಾದಾರರಿಗೆ ೨೦೨೩ರ ಮೇ ೩,ರವರೆಗೆ ಹೆಚ್ಚಿನ ಪಿಂಚಣಿ ಆಯ್ಕೆ ಮಾಡುವ ಸೌಲಭ್ಯವನ್ನು ಒದಗಿಸಿದೆ.ಇಪಿಎಫ್‌ಒ ಈ ವರ್ಷದ ಜನವರಿಯಲ್ಲಿ ೧೪.೮೬ ಲಕ್ಷ ಚಂದಾದಾರರನ್ನು ಸೇರಿಸಿದೆ. ಸುಮಾರು ೩.೫೪ ಲಕ್ಷ ಸದಸ್ಯರು ಇಪಿಎಫ್‌ಒನಿಂದ ನಿರ್ಗಮಿಸಿದ್ದಾರೆ, ಇದು ಕಳೆದ ನಾಲ್ಕು ತಿಂಗಳಲ್ಲಿ “ಕಡಿಮೆ ನಿರ್ಗಮನ” ಎಂದು ಸಚಿವಾಲಯ ತಿಳಿಸಿದೆ.
೧೪.೮೬ ಲಕ್ಷ ಚಂದಾದಾರರಲ್ಲಿ, ಸುಮಾರು ೭.೭೭ ಲಕ್ಷ ಹೊಸ ಸದಸ್ಯರು ಮೊದಲ ಬಾರಿಗೆ ಇಪಿಎಫ್‌ಒ ವ್ಯಾಪ್ತಿಯಲ್ಲಿ ಬಂದಿದ್ದಾರೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.