ಇನ್ಸ್ಪೈರ್ ಅವಾರ್ಡ್ : ವಿವೇಕಾನಂದ ವಿದ್ಯಾ ನಿಕೇತನ ಶಾಲೆಯ ವಿದ್ಯಾರ್ಥಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಕಲಬುರಗಿ:ಜು.03:ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಕೇಂದ್ರ ಸರ್ಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ಆಯೋಜಿಸುವ ಇನ್ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ ವಿದ್ಯಾರ್ಥಿ ಅಂಕುಶ ಅಣವೀರಪ್ಪ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು ಇತರ ವಿದ್ಯಾರ್ಥಿಗಳಿಗೆ ಉತ್ತಮ ಸ್ಪೂರ್ತಿ, ಎಂದು ಸುವರ್ಣ ಭಗವತಿ ಹೇಳಿದರು.
ರಾಮ ಮಂದಿರ ಸಮೀಪವಿರುವ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಯನ್ನು ಸಂಸ್ಥೆಯ ಅಧ್ಯಕ್ಷ ಸುವರ್ಣ ಭಗವತಿ ಸನ್ಮಾನಿಸಿ ಮಾತನಾಡಿದರು. ಈ ಸಾಧನೆಗೆ ಕಾರಣರಾದ ವಿಜ್ಞಾನ ಶಿಕ್ಷಕ ನಿಖಿಲ್ ಪಾಟೀಲ್ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಿ ಗೌರವಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಿನ್ಸಿಪಾಲ್ ಸಿದ್ದಪ್ಪ ಭಗವತಿ, ಪ್ರತಿ ವರ್ಷ ಕೇಂದ್ರ ಸರಕಾರವು, ಶಿಕ್ಷಣ ಇಲಾಖೆಯ ಸಹಯೋಗದಲ್ಲಿ, ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮತ್ತು ನವೀನ ಚಿಂತನೆಯ ಸಂಸ್ಕೃತಿಯನ್ನು ಬೆಳೆಸಲು ಈ ಸ್ಪರ್ಧೆಗಳನ್ನು ಆಯೋಜಿಸುತ್ತದೆ. ನಮ್ಮ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ, ಅವರಲ್ಲಿ ಒಬ್ಬ ವಿದ್ಯಾರ್ಥಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಸದ ವಿಷಯ.
ವಿದ್ಯಾರ್ಥಿಯು ಕಾಗದದ ಕಾರ್ಖಾನೆಗಳ ತ್ಯಾಜ್ಯ ಬಳಸಿ ಸಿಮೆಂಟ್ ತರಹದ ಕಟ್ಟಡ ನಿರ್ಮಾಣದ ಸಾಮಗ್ರಿ ತಯಾರಿಸುವ ಪ್ರಾತ್ಯಕ್ಷಿಕೆ ಪ್ರಸ್ತುತ ಪಡಿಸಿದ್ದನು. ಈ ಪ್ರಾತ್ಯಕ್ಷಿಕೆಗೆ ಕಳೆದ ಸೆಪ್ಟೆಂಬರನಲ್ಲಿ, ಇಲಾಖೆಯಿಂದ ಪ್ರೋತ್ಸಾಹ ರೂಪದಲ್ಲಿ ಹತ್ತು ಸಾವಿರ ನಗದು ಬಹುಮಾನವನ್ನು ನೀಡಲಾಗಿತ್ತು ಎಂದರು. ವಿದ್ಯಾರ್ಥಿಯ ಈ ಸಾಧನೆಗೆ ಪೋಷಕರು, ಶಿಕ್ಷಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.