ಇನ್ಸ್‌ಪೆಕ್ಟರ್ ನಂದೀಶ್ ಪ್ರಕರಣ ತನಿಖೆಗೆ ಸಿಎಂ ಸೂಚನೆ

ಬೆಂಗಳೂರು,ಅ.೩೦- ಪತ್ರಕರ್ತರಿಗೆ ದೀಪಾವಳಿ ಹಬ್ಬದ ಗಿಫ್ಟ್ ನೀಡುವಂತೆ ನಾನು ಯಾರಿಗೂ ಸೂಚನೆ ನೀಡಿಲ್ಲ. ಕಾಂಗ್ರೆಸ್ ಪಕ್ಷ ಸುಳ್ಳನ್ನು ಸೃಷ್ಟಿಸುವ ಕೆಲಸ ಮಾಡುತ್ತಿದೆ. ಇದೆಲ್ಲ ಕಾಂಗ್ರೆಸ್‌ನ ಟೂಲ್‌ಕಿಟ್ ಪರಿಣಾಮ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಕಲಬುರಗಿಗೆ ಹೊರಡುವ ಮುನ್ನ ಬೆಂಗಳೂರಿನ ಆರ್‌ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಿಂದೆ ಅಧಿಕಾರದಲ್ಲಿದ್ದಾಗ ಹಲವಾರು ಜನರಿಗೆ ಏನೇನು ಉಡುಗೊರೆಯನ್ನು ನೀಡಿದ್ದಾರೆ ಎನ್ನುವುದೂ ಗೊತ್ತಿದೆ. ಈ ಬಗ್ಗೆ ಪತ್ರಿಕೆಗಳಲ್ಲಿ ವರದಿಗಳೂ ಆಗಿದೆ. ಐ ಫೋನ್, ಲ್ಯಾಪ್‌ಟಾಪ್, ಬಂಗಾರದ ನಾಣ್ಯಗಳನ್ನೇ ಕೊಟ್ಟಿದ್ದಾರೆ. ಇವರಿಗೆ ಈ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಪತ್ರಕರ್ತರಿಗೆ ಉಡುಗೊರೆ ನೀಡಿದ ಬಗ್ಗೆ ಯಾರೋ ಒಬ್ಬರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಉಡುಗೊರೆ ನೀಡುವ ಬಗ್ಗೆ ನಾನು ಯಾರಿಗೂ ಸೂಚನೆ ನೀಡಿಲ್ಲ. ಲೋಕಾಯುಕ್ತ ತನಿಖೆಯಾಗಲಿ ಸತ್ಯಾಂಶ ಹೊರಬರುತ್ತದೆ ಎಂದರು.
ಕಾಂಗ್ರೆಸ್ ವಕ್ತಾರರು ಈ ಬಗ್ಗೆ ಬಹಳ ಕೆಟ್ಟದ್ದಾಗಿ ವ್ಯಾಖ್ಯಾನ ಮಾಡಿರುವುದನ್ನು ಖಂಡಿಸುತ್ತೇನೆ. ಎಲ್ಲ ಪತ್ರಕರ್ತರು ಉಡುಗೊರೆ ಪಡೆದಿದ್ದಾರೆ ಎಂದು ವ್ಯಾಖ್ಯಾನ ಮಾಡಿರುವುದು ಸರಿಯಲ್ಲ ಎಂದರು.
ತನಿಖೆ
ಅಮಾನತಿಗೊಳಗಾಗಿ ಹೃದಯಾಘಾತದಿಂದ ಮೃತಪಟ್ಟ ಪೊಲೀಸ್ ಇನ್ಸ್‌ಪೆಕ್ಟರ್ ನಂದೀಶ್ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು, ಪೊಲೀಸ್ ಇನ್ಸ್‌ಪೆಕ್ಟರ್ ನಂದೀಶ್ ಪ್ರಕರಣದ ಬಗ್ಗೆ ತನಿಖೆ ನಡೆಸಿ ಎಂದು ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ ಎಂದವರು.ಈ ಪ್ರಕರಣದ ಬಗ್ಗೆ ತನಿಖೆಗೆ ಹಿಂದೆ-ಮುಂದೆ ನೋಡುವ ಪ್ರಶ್ನೆಯೇ ಇಲ್ಲ. ತನಿಖೆ ನಂತರ ಎಲ್ಲ ಸತ್ಯಾಂಶಗಳು ಹೊರ ಬರಲಿದೆ ಎಂದರು.ಓಬಿಸಿ, ಹಿಂದುಳಿದ ವರ್ಗಗಳು ದೊಡ್ಡ ಪ್ರಮಾಣದಲ್ಲಿ ಬಿಜೆಪಿಗೆ ಬೆಂಬಲ ನೀಡಿರುವ ಯ್ಜೋತಕವಾಗಿ ಕಲಬುರಗಿಯಲ್ಲಿಂದು ಓಬಿಸಿ ಸಮಾವೇಶ ನಡೆಸಿದ್ದೇವೆ. ನವೆಂಬರ್ ತಿಂಗಳಿನಲ್ಲಿ ಬಳ್ಳಾರಿಯಲ್ಲಿ ಪರಿಶಿಷ್ಟ ಪಂಗಡಗಳ ಸಮಾವೇಶವಿದೆ. ಹುಬ್ಬಳ್ಳಿಯಲ್ಲಿ ರೈತರ ಸಮಾವೇಶ ನಡೆಯಲಿದ್ದು, ಡಿಸೆಂಬರ್ ತಿಂಗಳಿನಲ್ಲಿ ಮಹಿಳೆಯರ ಸಮಾವೇಶ ಆಗಲಿದ್ದು, ಹಾಗೆಯೇ ಪರಿಶಿಷ್ಟ ಸಮುದಾಯದ ಸಮಾವೇಶವೂ ನಡೆಯಲಿದೆ. ಇವೆಲ್ಲ ಪಕ್ಷದ ಕೋರ್‌ಕಮಿಟಿಯ ತೀರ್ಮಾನ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.