ಇನ್‌ಸ್ಟಾಗ್ರಾಂನಲ್ಲಿ ದಳಪತಿ ವಿಜಯ್

ಚೆನ್ನೈ, ಏ.೪- ತಮಿಳಿನ ಸೂಪರ್ ಸ್ಟಾರ್ ನಟ ದಳಪತಿ ವಿಜಯ್ ಅವರು ಇನ್ಸ್ಟಾಗ್ರಾಂ ಪ್ರವೇಶ ಪಡೆಯುವ ಮೂಲಕ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದಾರೆ.
ವಿಜಯ್‌ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರು ಎಂದರೆ ತಪ್ಪಾಗಲಾರದು. ಆದರೆ ಸೋಷಿಯಲ್ ಮೀಡಿಯಾದಿಂದ ತುಸು ದೂರವೇ ಉಳಿದಿದ್ದ ವಿಜಯ್ ಇದೀಗ ಇನ್ಸ್ಟಾಗ್ರಾಂ ಖಾತೆಯನ್ನು ತೆರೆದಿದ್ದಾರೆ.
ವಿಜಯ್ ಅವರ ಫೇಸ್ಬುಕ್ ಹಾಗೂ ಟ್ವಿಟ್ಟರ್ ಖಾತೆ ಇದ್ದರು ಹೆಚ್ಚು ಟ್ವೀಟ್ ಮಾಡುವುದಿಲ್ಲ.
ಇನ್ನು ಫೇಸ್ಬುಕ್‌ನಲ್ಲಿ ಪೋಸ್ಟ್ ಮಾಡಿ ವರ್ಷಗಳೇ ಆಗಿಬಿಟ್ಟಿದೆ. ಈ ಮಧ್ಯೆ ಇದ್ದಕ್ಕಿದ್ದ ಹಾಗೆ ವಿಜಯ್ ಇನ್ಸ್ಟಾಗ್ರಾಂ ಖಾತೆ ತೆರೆದಿದ್ದು, ಇನ್ಸ್ಟಾಗ್ರಾಂಗೆ ಕಾಲಿಟ್ಟ ಕೇವಲ ನಾಲ್ಕು ಗಂಟೆಯಲ್ಲಿ ೨೫ ಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಆಕ್ಟರ್ ವಿಜಯ್ ಹೆಸರಿನಲ್ಲಿ ಖಾತೆ ತೆರೆದಿರುವ ವಿಜಯ್ ತಮ್ಮ ಸುಂದರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಹಲೋ ಗೆಳೆಯ-ಗೆಳತಿಯರೇ ಎಂದು ಬರೆದುಕೊಂಡಿದ್ದಾರೆ. ಚಿತ್ರ ಹಂಚಿಕೊಂಡ ನಾಲ್ಕು ಗಂಟೆಯಲ್ಲಿಯೇ ೨೫ ಲಕ್ಷ ಲೈಕ್‌ಗಳು ಬಂದಿದ್ದು, ೨೫ ಲಕ್ಷಕ್ಕೂ ಹೆಚ್ಚು ಮಂದಿ ವಿಜಯ್ ಅವರನ್ನು ಫಾಲೋ ಮಾಡಿದ್ದಾರೆ.

ಇನ್ನೂ ಸಿನಿಮಾಗಳ ವಿಷಯಕ್ಕೆ ಬರುವುದಾದರೆ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ನಟಿಸಿರುವ ವಾರಿಸು ಸಿನಿಮಾ ಜನವರಿಯಲ್ಲಿ ಬಿಡುಗಡೆ ಆಗಿದ್ದು ಸೂಪರ್ ಹಿಟ್ ಆಗಿತ್ತು. ಇದೀಗ ಲೋಕೇಶ್ ಕನಗರಾಜ್ ನಿರ್ದೇಶನದ ಲಿಯೋ ಸಿನಿಮಾದಲ್ಲಿ ವಿಜಯ್ ನಟಿಸುತ್ತಿದ್ದಾರೆ. ಜೊತೆಗೆ ಶಾರುಖ್ ಖಾನ್ ನಟಿಸುತ್ತಿರುವ ಜವಾನ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.