ಇನ್ವೆಸ್ಟ್ ಕರ್ನಾಟಕಕ್ಕೆ ತೆರೆ ೧೦ ಲಕ್ಷ ಕೋಟಿ ಬಂಡವಾಳ

ಬೆಂಗಳೂರು,ನ.೪- ಇನ್ವೆಸ್ಟ್ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಇಂದು ಸಂಜೆ ತೆರೆ ಬೀಳಲಿದ್ದು, ಸಮಾವೇಶ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ೧೦ ಲಕ್ಷ ಕೋಟಿ ರೂ,ಗೂ ಹೆಚ್ಚು ಬಂಡವಾಳ ಹರಿದು ಬಂದಿದ್ದು, ೧೦ ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ಅಂದಾಜಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಜಾಗತಿಕ ಹೂಡಿಕೆದಾರರ ಸಮಾವೇಶದ ಯಶಸ್ಸಿನ ಸಂತಸವನ್ನು ಹಂಚಿಕೊಂಡಿರುವ ಅವರು, ಈ ಬಾರಿ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ೫ ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಹಾಗೂ ೫ ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ನಮ್ಮದಾಗಿತ್ತು. ೩ನೇ ದಿನವಾದ ಇಂದು ಹೂಡಿಕೆದಾರರ ಸಮಾವೇಶದಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಉದ್ಯಮಿಗಳು ೧೦ ಲಕ್ಷ ಕೋಟಿ ರೂ.ಗೂ ಅಧಿಕ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿರುವುದು ನಮ್ಮ ನಿರೀಕ್ಷೆಯನ್ನೂ ಮತ್ತಷ್ಟು ಹೆಚ್ಚುವಂತೆ ಮಾಡಿದೆ ಎಂದಿದ್ದಾರೆ.
ಈ ಸಮಾವೇಶದ ಒಟ್ಟು ಹೂಡಿಕೆ ಮೊತ್ತ ಹಾಗೂ ಪೂರ್ಣ ವಿವರಗಳನ್ನು ಇಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ನೀಡುವರು ಎಂದು ಅವರು ಹೇಳಿ ಒಟ್ಟಾರೆ ೩ ದಿನಗಳ ಜಾಗತಿಕ ಹೂಡಿಕೆದಾರರ ಸಮಾವೇಶ ಯಶಸ್ವಿಯಾಗಿ ಮುಗಿದಿದೆ ಎಂದು ಹೇಳಿದರು.