ಇನ್ವೆಂಜರ್ ಫೌಂಡೇಶನ್‌ನಿಂದ ಅತ್ಯಾಧುನಿಕಆಂಬ್ಯುಲೆನ್ಸ್ ಸೇವಾರ್ಪಣೆಗೈದು ಸಂಸದ ಕಟೀಲ್

ಮಂಗಳೂರು, ಜೂ.೮-  ಮದ್ದುಮನೆಬಂಡಿ ಎಂದೇ ಜನನಜಿತ ಆಂಬ್ಯುಲೆನ್ಸ್ ಸೇವೆ ಪ್ರಸಕ್ತ ಕಾಲಕ್ಕೆ ಅತ್ಯವಶ್ಯ ಮತ್ತು ಯಥೇಚ್ಛವಾಗಿ ಉಪಯುಕ್ತವಾಗಿದೆ.  ಇದು ವೈದ್ಯಕೀಯವಾಗಿ ಸುಸಜ್ಜಿತ ವಾಹನವಾಗಿದ್ದು, ರೋಗಿಗಳನ್ನು ಆಸ್ಪತ್ರೆಗಳಂತಹ ಚಿಕಿತ್ಸಾ ಸೌಲಭ್ಯಗಳಿಗೆ ಸಾಗಿಸಲು ಸಹಕಾರಿ. ಆದ್ದರಿಂದ ಆಂಬ್ಯುಲೆನ್ಸ್‌ನ ಸ್ಥಿತಿಯೂ ಉತ್ತಮ ಮತ್ತು ಇದರ ಚಾಲಕರ ಮನಸ್ಥಿತಿಯೂ ಸದೃಢವಾಗಿರಬೇಕಾಗುತ್ತದೆ. ಆದುದರಿಂದ ಇಂತಹ ಸೇವೆ ಇನ್ವೆಂಜರ್‌ನಂತಹ ಸದೃಢ ಸಂಸ್ಥೆಗಳಿಂದ ಮಾತ್ರ ಸಾಧ್ಯವಾಗುವುದು. ಇಂತಹ ವಾಹನದ ಸೇವೆ ಯಾವೊತ್ತೂ ದುರುಪಯೋಗ ಆಗದೆ ಜನಸಾಮಾನ್ಯರ ಅವಶ್ಯತೆಗೆ ಉಪಯುಕ್ತವಾಗಲಿ ಎಂದು ಬಿಜೆಪಿ ಕರ್ನಾಟಕ ರಾಜ್ಯಧ್ಯಕ್ಷ, ಮಂಗಳೂರು ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದರು.

ಮಂಗಳೂರು ಕೊಟ್ಟಾರ ಅಲ್ಲಿ ಕಛೇರಿ ಹೊಂದಿರುವ ಪ್ರತಿಷ್ಟಿತ  ಇನ್ವೆಂಜರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಇದರ ಅದೀನದಲ್ಲಿರುವ ಇನ್ವೆಂಜರ್ ಫೌಂಡೇಶನ್ ಹಾಗೂ ಕೀತನ್ ಕೀಶಾ ಫೌಂಡೇಶನ್ (ಯುಎಸ್‌ಎ) ತಮ್ಮ ಜಂಟಿ ಸಹಯೋಗದೊಂದಿಗೆ ಬಡರೋಗಿಗಳ ಉಚಿತ ಸೇವೆಗಾಗಿ ಆಯ್ದ ಆಂಬ್ಯುಲೆನ್ಸ್ ವಾಹನವನ್ನು ಕಳೆದ ಭಾನುವಾರ ಮಂಗಳೂರು ಮಹಾನಗರ ಪಾಲಿಕೆಗೆ   ಹಸ್ತಾಂತರಿಸಿದ್ದು ಕಾರ್ಯಕ್ರಮದಲ್ಲಿ ಉಪಸ್ಥಿತ ಸಂಸದ ಕಟೀಲ್ ಸಾಂಪ್ರದಾಯಿಕವಾಗಿ ಆಂಬ್ಯುಲೆನ್ಸ್‌ಗೆ ಚಾಲನೆ ನೀಡಿ ಸೇವಾರ್ಪಣೆಗೈದು ಇನ್ವೆಂಜರ್ ಸಂಸ್ಥೆಗೆ ಅಭಿವಂದಿಸಿ ಶುಭಕೋರಿದರು.

ಮಂಗಳೂರು  ಮಹಾನಗರ ಪಾಲಿಕಾ ಮೇಯರ್ ಪ್ರೇಮಾನಂದ ಶೆಟ್ಟಿ ಸ್ವತಃ ಅಂಬ್ಯುಲೆನ್ಸ್ ಚಲಾಯಿಸಿ ಪರಿಶೀಲಿಸಿ ಈ ಅಂಬ್ಯುಲೆನ್ಸ್ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದ್ದು ಆಕ್ಸಿಜನ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ದಿನದ ೨೪ ಗಂಟೆಯೂ ಈ ಆಂಬ್ಯುಲೆನ್ಸ್ ಜನಸಾಮಾನ್ಯರ ಸೇವೆಗೆ ಸದಾ ಸಿದ್ಧ್ದವಿದ್ದು ಇದರ ಚಾಲಕ, ಇಂಧನ ಮತ್ತು ಸಂಪೂರ್ಣ ನಿರ್ವಹಣಾ ವೆಚ್ಚಗಳನ್ನು ಇನ್ವೆಂಜರ್ ಸಂಸ್ಥೆ ಭರಿಸಲಿದೆ ಎಂದರು.

ಇನ್ವೆಂಜರ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಯುಎಸ್‌ಎ) ಕೃಷ್ಣ ಮೋಹನ್ ಪೈ ಸಂದೇಶ ರವಾನಿಸಿ ಕೋವಿಡ್ ಮಹಾಮಾರಿಯ ಈ ಸಂದರ್ಭದಲ್ಲಿ ಜನಸಾಮಾನ್ಯರು ತಮ್ಮ ಪ್ರಾಣಪಕ್ಷಿಯ ಉಳಿಸುವಿಕೆಗಾಗಿ ಅಂಬ್ಯುಲೆನ್ಸ್ ಸದುಪಯೋಗ ಪಡೆಯುವಂತಾಗಲಿ ಎಂದು ಆಶಿಸಿ ಪಾಲಿಕೆ ನಮ್ಮ ಸೇವಾ ಮನೋಭಾವವನ್ನು ಅರ್ಥೈಸಿ ವ್ಯವಸ್ಥಿತವಾಗಿ ಮತ್ತು ಪ್ರಾಮಾಣಿಕವಾಗಿ ಜನಸೇವೆಗೆ ಒದಗಿಸುವಲ್ಲಿ ಶ್ರಮಿಸುವ ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಇನ್ವೆಂಜರ್ ಸಂಸ್ಥೆಯ ನಿರ್ದೇಶಕ ಕೆ.ಸತ್ಯೇಂದ್ರ ಪೈ, ಮಹಾನಗರ ಪಾಲಿಕಾ ಆಯುಕ್ತ ಅಕ್ಷಯ್ ಶ್ರೀಧರ್, ಸಹಾಯಕ ಆಯುಕ್ತ ಸಂತೋಷ್ ಕುಮಾರ್, ಕಾರ್ಪೋರೆಟರ್ ಲೀಲಾವತಿ ಪ್ರಕಾಶ್, ಡಾ| ಸುಜಯ್ ಭಂಡಾರಿ, ಮಂಗಳಾ ಕ್ಯಾಶ್ಯೂ ಇದರ ಆಡಳಿತ ಪಾಲುದಾರ ಡಿ.ವಾಸುದೇವ ಕಾಮತ್, ಇನ್ವೆಂಜರ್ ಸಂಸ್ಥೆಯ ವ್ಯವಸ್ಥಾಪಕರಾದ ನರಸಿಂಹ ಮಲ್ಯ, ಹರೀಶ್ ಕಾಮತ್, ಅನಿಲ್ ಸಾಲ್ಯಾನ್, ಮೋಹನ್ ಪಡ್ರೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.