ಇನ್ನೊಬ್ಬರ ಜೀವ ಉಳಿಸುವ ನಿಟ್ಟಿನಲ್ಲಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ: ಡಾ.ರವೀಂದ್ರ ಕನಕೇರಿ

ಕಂಪ್ಲಿ ಡಿ 29 : ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸರಕ್ತ ಉತ್ಪತ್ತಿಯಾಗುವುದರ ಜೊತೆಗೆ ಕೊಬ್ಬಿನಾಂಶ ತಗ್ಗಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರವೀಂದ್ರ ಕನಕೇರಿ ಸ್ವಯಂಪ್ರೇರಿತ ರಕ್ತದಾನಿಗಳಿಗೆ ಮಾಹಿತಿ ನೀಡಿದರು‌.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರದಂದು ಆರೋಗ್ಯ ಕೇಂದ್ರ ಹಾಗು
ಬಳ್ಳಾರಿಯ ವಿಮ್ಸ್ ರಕ್ತಭಂಡಾರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಬಳಿಕ‌ ಮಾತನಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗು ನಿರ್ವಾಹಕ ಘಟಕ ಬಳ್ಳಾರಿ ಇವರ ಆದೇಶದನ್ವಯ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ರಕ್ತದಾನ ಮಾಡಬಯಸುವವರ ವಯಸ್ಸು 18ರಿಂದ 60 ವರ್ಷದೊಳಗಿರಬೇಕು. ಪುರುಷರು 3 ತಿಂಗಳಿಗೊಮ್ಮೆ, ಸ್ತ್ರೀಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. 45 ಕೆ.ಜಿ.ದೇಹದ ತೂಕ ಹಾಗು 12.5 ಗ್ರಾಂ‌ಗಿಂತ ಹೆಚ್ಚು ಹಿಮೋಗ್ಲೋಬಿನ್ ಹೊಂದಿರುವವರು ಸ್ವಯಂಪ್ರೇರಿತರಾಗಿ ರಕ್ತವನ್ನು ಕೊಡಬಹುದು. ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವುದರಿಂದ ಅನೇಕ ಜೀವಗಳನ್ನು ಉಳಿಸಿದಂತಾಗಲಿದ್ದು, ಅದರ ಜೊತೆಗೆ ದಾನಿಗಳ ಆರೋಗ್ಯಕ್ಕೂ ಸಾಕಷ್ಟು ಆರೋಗ್ಯಕರ ಲಾಭಗಳಾಗಲಿವೆ. ದೇಹದಲ್ಲಿ ಹೊಸ ರಕ್ತ ಚಲನೆಯಿಂದ ಕಾರ್ಯತತ್ಪರತೆ, ಜ್ಞಾಪಕ ಶಕ್ತಿ ಹೆಚ್ಚಳ, ರಕ್ತದಲ್ಲಿನ ಕೊಬ್ಬಿನಾಂಶ ತಗ್ಗುವುದು. ಶೇ.80ಕ್ಕೂ ಜಾಸ್ತಿ ಹೃದಯಾಘಾತವನ್ನು ತಡೆಗಟ್ಟಬಹುದು. ಅಲ್ಲದೆ ರಕ್ತದೊತ್ತಡ, ಇನ್ನಿತರೆ ರೋಗಗಳನ್ನು ನಿಯಂತ್ರಿಸುವಲ್ಲಿ ರಕ್ತದಾನ ಮಾಡುವ ದಾನಿಗಳಿಗೆ ಸಹಕಾರಿಯಾಗಲಿದೆ. ಇವತ್ತಿನ ರಕ್ತದಾನ ಶಿಬಿರದಲ್ಲಿ ಒಟ್ಟು 100 ಯೂನಿಟ್ ರಕ್ತಸಂಗ್ರಹದ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಆರೋಗ್ಯ ಕೇಂದ್ರದ ಆಯುಷ್ ವೈದ್ಯಾಧಿಕಾರಿ ಡಾ.ಮಲ್ಲೇಶಪ್ಪ ಮಾತನಾಡಿ, ಕಂಪ್ಲಿ ಪಟ್ಟಣ ಹಾಗು ತಾಲೂಕಿನ ವಿವಿಧ ಗ್ರಾಮಗಳ ಸಾರ್ವಜನಿಕರು, ಸ್ವಯಂಸೇವಕರು, ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದ್ದಾರೆ‌. ನೂರು ಯೂನಿಟ್ ರಕ್ತಸಂಗ್ರಹದ ಗುರಿ ತಲುಪುವಲ್ಲಿ ಸಾರ್ವಜನಿಕರು ಸಹಕರಿಸಬೇಕಿದೆ. ದಾನಿಗಳು ನೀಡುವ ರಕ್ತ ಅನೇಕ ಜೀವಗಳಿಗೆ ಸಂಜೀವಿನಿಯಾಗಲಿದೆ ಎಂದರು.
ಸಮುದಾಯ ಆರೋಗ್ಯ ಕೇಂದ್ರದ ಜೌಷಧಿ ಅಧಿಕಾರಿ ಶಿವರುದ್ರಪ್ಪ, ಆರೋಗ್ಯ ಹಿರಿಯ ಮೇಲ್ವಿಚಾರಕ ಚನ್ನಬಸವರಾಜ, ಬಳ್ಳಾರಿಯ ಡಾ.ಅಂಕಿತಾ, ಬಳ್ಳಾರಿಯ ವಿಮ್ಸ್ ರಕ್ತಭಂಡಾರದ ಸಿಬ್ಬಂದಿ ಸೇರಿದಂತೆ ಇನ್ನಿತರರು ಶಿಬಿರದಲ್ಲಿ ಭಾಗಿಯಾಗಿದ್ದರು.