
ಕಲಬುರಗಿ,ಜ.12-ಇದೇ ತಿಂಗಳ 16 ರಂದು ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಆರಂಭವಾಗಲಿದ್ದು, ನಾಳೆ ಅಥವಾ ನಾಡಿದ್ದು ಬೆಂಗಳೂರಿನಿಂದ ಕಲಬುರಗಿಗೆ ಕೋವಿಡ್ ಲಸಿಕೆ ಬರಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ ತಿಳಿಸಿದರು.
ಲಸಿಕೆ ಸಂಗ್ರಹಕ್ಕೆ ಬೇಕಾದ ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಲಸಿಕೆ ಬಂದು ತಲುಪಿದ ನಂತರ ಅದನ್ನು ತಾಲ್ಲೂಕ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲುಪಿಸಲಾಗುವುದು, 16 ರಂದು ಮೊದಲ ಹಂತದಲ್ಲಿ ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು. ಇದಕ್ಕಾಗಿ ಪ್ರತಿಯೊಂದು ಲಸಿಕಾ ಕೇಂದ್ರದಲ್ಲಿ ಮೂರು ಕೊಠಡಿಗಳನ್ನು ಮೀಸಲಿಡಲಾಗಿದ್ದು, ನಿರೀಕ್ಷಣಾ ಕೊಠಡಿ, ಲಸಿಕೆ ಕೊಠಡಿ ಮತ್ತು ನಿಗಾ ಕೊಠಡಿ ಇದರಲ್ಲಿ ಸೇರಿವೆ. ಪ್ರತಿಯೊಂದು ಕೇಂದ್ರದಲ್ಲಿ ತಜ್ಞ ವೈದ್ಯರು, ಆರೋಗ್ಯ ಸಿಬ್ಬಂದಿ ಸೇರಿ ಐದು ಜನ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.
ಕೋವಿಡ್-19 ಲಸಿಕೆ ಹಾಕುವ ಅಭಿಯಾನಕ್ಕೆ ಪೂರ್ವಭಾವಿಯಾಗಿ ಈಗಾಗಲೆ ಎರಡು ಹಂತದಲ್ಲಿ ನಡೆಸಿದ ಅಣಕು ಕಾರ್ಯಾಚರಣೆ ಯಶಸ್ವಿಯಾಗಿದೆ. ಮೊದಲ ಹಂತದಲ್ಲಿ ಜಿಲ್ಲೆಯ ಮೂರು ಕಡೆ, ಎರಡನೇ ಹಂತದಲಿಲ ನಗರದ ಜಿಮ್ಸ್ ಕಾಲೇಜ್, ಎಂ.ಆರ್.ಮೆಡಿಕಲ್ ಕಾಲೇಜ್, ಶಿವಾಜಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ, ಸೇಡಂ ತಾಲ್ಲೂಕ ಆಸ್ಪತ್ರೆ, ರಟಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಚಿತ್ತಾಪುರ ತಾಲ್ಲೂಕಿನ ಹೆಬ್ಬಾಳ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್-19 ಲಸಿಕೆಯ ಡ್ರೈರನ್ ನಡೆಸಲಾಗಿತ್ತು.
16 ರಂದು ದೇಶಾದ್ಯಂತ ಲಸಿಕೆ ನೀಡುವ ಅಭಿಯಾನ ಆರಂಭವಾಗಲಿದ್ದು, ಅದರಂತೆ ಜಿಲ್ಲೆಯಲ್ಲಿಯೂ ಸಹ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.