ಇನ್ನೂ 50 ವರ್ಷ ಕಳೆದರೂ ಕಾಂಗ್ರೆಸ್ ಅಧಿಕಾರಕ್ಕೆ ಬಾರದು: ಎಚ್.ಡಿ.ಕುಮಾರಸ್ವಾಮಿ

ಮಳವಳ್ಳಿ: ಮೇ.06:- ಐದು ವರ್ಷ ಆಡಳಿತ ನಡೆಸಿ ಬಹುಮತ ಕಳೆದುಕೊಂಡ ಕಾಂಗ್ರೆಸ್ ಇನ್ನೂ 50 ವರ್ಷ ಕಳೆದರೂ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವುದಿಲ್ಲ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಅನಂತ್ ರಾಂ ವೃತ್ತದ ಬಳಿ ಆಯೋಜಿಸಿದ್ದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ಪಕ್ಷದಿಂದ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯರೊಬ್ಬರು ಕಾಂಗ್ರೆಸ್ ಗೆ ಬಹುಮತ ನೀಡಿ ಎಂದು ಹೇಳಿಕೆ ನೀಡಿದ್ದಾರೆ.ಅವರಿಗೆ ಗೊತ್ತಿಲ್ಲ, ಹಿಂದೆ ಐದು ವರ್ಷ ಅಧಿಕಾರ ಮಾಡಿ ಬಹುಮತದಿಂದ 78 ಸ್ಥಾನಕ್ಕಿಳಿದ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ 38ಕ್ಕೆ ಇಳಿಯಲಿದೆ ಎಂದರು.
ಈ ಬಾರಿಯ ಚುನಾವಣೆಯು ಬಡವರ ಬದುಕಿಗೆ ಹೊಸ ಕಾಯಕಲ್ಪ ನೀಡುವ ಚುನಾವಣೆಯಾಗಿದೆ. ಹೀಗಾಗಿ ಪಂಚರತ್ನ ಯಾತ್ರೆಯ ಮೂಲಕ ರಾಜ್ಯಾದ್ಯಂತ ಪ್ರವಾಸ ಮಾಡಿ ಜನರ ಮನ ಗೆದ್ದಿರುವೆ. ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಬಡವರ ಬದುಕು ಇದುವರೆಗೂ ಸುಧಾರಣೆ ಕಂಡಿಲ್ಲ. ಮುಂದಿನ ಜೆಡಿಎಸ್ ಸರ್ಕಾರದಲ್ಲಿ ರೈತರು, ಬಡವರು, ನಿರುದ್ಯೋಗಿಗಳ ಸಮಸ್ಯೆ ನಿವಾರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.
ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕುರುಬ ಸಮುದಾಯದ ಮುಖಂಡರು ಬಂಡೂರು ಕುರಿ ಮರಿಯೊಂದನ್ನು ನೀಡಿದರು. ಜೆಡಿಎಸ್ ಅಭ್ಯರ್ಥಿ, ಶಾಸಕ ಡಾ.ಕೆ.ಅನ್ನದಾನಿ,ವಿಧಾನ ಪರಿಷತ್ ಮಾಜಿ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಜಿಲ್ಲಾ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಬಿ.ರವಿ ಕಂಸಾಗರ, ಜೆಡಿಎಸ್ ಹಿಂದುಳಿದ ವರ್ಗ ವಿಭಾಗ ಅಧ್ಯಕ್ಷ ಜಯರಾಮು ಇದ್ದರು.