ಇನ್ನೂ 40 ದಿನ ಕೊರೊನಾ ಕಾಟ!

ಬೆಂಗಳೂರು, ಏ. ೨೬- ರಾಜ್ಯದಲ್ಲಿ ಕೊರೊನಾ ೨ನೇ ಅಲೆ ೩೦-೪೦ ದಿನ ಇರಲಿದೆ ಎಂದು ಹೇಳಿರುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ರೋಗ ಲಕ್ಷಣಗಳಿಲ್ಲದಿರದವರು ಆಸ್ಪತ್ರೆಗೆ ದಾಖಲಾಗದೆ ಮನೆಯಲ್ಲೆ ಚಿಕಿತ್ಸೆ ಪಡೆಯುವಂತೆ ಸಲಹೆ ಮಾಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ೨ನೇ ಅಲೆ ೪೦ ದಿನ ಇರಲಿದೆ ಎಂದು ತಜ್ಞರು ಹೇಳಿದ್ದಾರೆ. ಅಲ್ಲಿಯವರೆಗೂ ಜನರು ಅನಗತ್ಯವಾಗಿ ಮನೆಯಿಂದ ಹೊರ ಬರುವುದು ಸೂಕ್ತವಲ್ಲ. ಆದಷ್ಟು ಮನೆಯಲ್ಲೆ ಉಳಿದು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದರು.
ದೇಶದ ಎಲ್ಲೆಡೆ ಈಗ ಕೊರೊನಾ ೨ನೇ ಅಲೆ ಇದೆ. ಮೊದಲನೇ ಅಲೆಗಿಂತ ೨ನೇ ಅಲೆಯಲ್ಲಿ ಹೆಚ್ಚು ಜನ ಸೋಂಕಿತರಾಗುತ್ತಿದ್ದಾರೆ ಎಂದು ಅವರು ಹೇಳಿದರು.
೨ನೇ ಅಲೆಯಲ್ಲಿ ಕೊರೊನಾ ಪಾಸಿಟಿವ್ ಬಂದರೂ ಗಂಭೀರ ಸಮಸ್ಯೆ ಇಲ್ಲದವರು ಮನೆಯಲ್ಲೆ ಐಸೋಲೇಟ್ ಆಗಿ ಚಿಕಿತ್ಸೆ ಪಡೆಯಬಹುದು. ಗಂಭೀರ ಸಮಸ್ಯೆ ಇರುವವರು ಮಾತ್ರ ಆಸ್ಪತ್ರೆಗೆ ದಾಖಲಾಗಬೇಕು ಎಂದು ಅವರು ಹೇಳಿದರು.
ಕೊರೊನಾ ಪಾಸಿಟಿವ್ ಎಂದ ತಕ್ಷಣ ಭಯಪಡುವ ಅಗತ್ಯವಿಲ್ಲ. ಇದು ಸಾಮಾನ್ಯ ಜ್ವರ, ನೆಗಡಿಯಂತಹ ವೈರಸ್ ಆಗಿದೆ. ರೋಗ ಲಕ್ಷಣಗಳಿಲ್ಲದವರು ಮನೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಕೆಲವರಿಗೆ ಚಿಕಿತ್ಸೆ ಇಲ್ಲದೆಯೇ ಈ ಕೊರೊನಾ ಗುಣವಾಗುತ್ತಿದೆ ಎಂದು ಅವರು ಹೇಳಿದರು.
ಗಂಭೀರ ಸಮಸ್ಯೆ ಇಲ್ಲದವರು ಅನಗತ್ಯವಾಗಿ ಆಸ್ಪತ್ರೆಗೆ ದಾಖಲಾದರೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಸೋಂಕಿತರಿಗೆ ಹಾಸಿಗೆ, ಆಮ್ಲಜನಕ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದನ್ನು ತಪ್ಪಿಸುವಂತೆ ಅವರು ಮನವಿ ಮಾಡಿದರು.
ರಾಜ್ಯದಲ್ಲಿ ಆಮ್ಲಜನಕ ಕೊರತೆಯಾಗದಂತೆ ಕ್ರಮ ಕೈಗೊಳ್ಳುತ್ತಿದ್ದೇವೆ. ಕೋಲಾರದಲ್ಲಿ ಆಮ್ಲಜನಕ ಕೊರತೆಯಿಂದ ನಾಲ್ವರು ಮೃತಪಟ್ಟಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತಿದ್ದೇನೆ ಎಂದು ಅವರು ಹೇಳಿದರು.
ರೋಗ ಲಕ್ಷಣ ಇಲ್ಲದವರಿಗೆ ಮನೆಯಲ್ಲಿಯೇ ಟೆಲಿಕಾಲಿಂಗ್ ಮೂಲಕ ಔಷಧಿ, ವೈದ್ಯರಿಂದ ಮಾರ್ಗದರ್ಶನ ಪಡೆಯಬೇಕು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಲಾಕ್‌ಡೌನ್‌ನ್ನು ಜಾರಿ ಮಾಡುವ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಕಠಿಣ ಕ್ರಮಗಳ ಅಗತ್ಯವಿದೆ. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಎಲ್ಲವೂ ತೀರ್ಮಾನವಾಗಲಿದೆ ಎಂದು ಅವರು ಹೇಳಿದರು.