ಇನ್ನೂ ಹಳಿಗೆ ಬರದ ಹಮಾಲಿಗಳ ಬದುಕು !

ಕಲಬುರಗಿ,ಜ.11-ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೊರೊನಾ ವೈರಸ್ ಸೋಂಕು ತನ್ನ ಅಟ್ಟಹಾಸವನ್ನು ಕೊಂಚ ಕಡಿಮೆಯಾದರೂ ರೈಲ್ವೆ ಸದ್ದು ಮಾತ್ರ ಇನ್ನೂ ಶಾಂತವಾಗಿಯೇ ಇದೆ. ಇದರಿಂದಾಗಿ ರೈಲ್ವೆ ನಿಲ್ದಾಣಗಳಲ್ಲಿ ಕೂಲಿ ಮಾಡಿ ಬದುಕಿನ ಬಂಡಿ ಸಾಗಿಸುತ್ತಿದ್ದ ಹಮಾಲಿಗಳ ಬದುಕು ಅಕ್ಷರಶ: ಬೀದಿಗೆ ಬಿದ್ದಂತಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೆ ಇಲಾಖೆ ರೈಲು ಸಂಚಾರ ಕಡಿತಗೊಳಿಸಿರುವುದರಿಂದ ರೈಲು ನಿಲ್ದಾಣಗಳಲ್ಲಿ ಕೂಲಿ ಕೆಲಸ ಮಾಡಿ ಬದುಕು ಸಾಗಿಸುತ್ತಿದ್ದ ಹಮಾಲಿಗಳಿಗೆ ಕೂಲಿ ಸಿಗದೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಇದರಿಂದಾಗಿ ಅವರ ಕುಟುಂಬ ನಿರ್ವಹಣೆ ಕಷ್ಟವಾಗಿದೆ.
ಸುಮಾರು ಹದಿನೈದು ವರ್ಷಗಳಿಂದ ಕಲಬುರ್ಗಿಯ ರೈಲ್ವೆ ನಿಲ್ದಾಣದಲ್ಲಿ ಹಮಾಲಿಗಳು ತಮ್ಮ ಕಾಯಕವನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಆದರೆ, ಏಕಾಏಕಿ ಮಹಾಮಾರಿಯ ಹೊಡೆತದಿಂದಾಗಿ ಅವರು ಇನ್ನಿಲ್ಲದ ಸಂಕಷ್ಟ ಎದುರಿಸುವಂತಾಗಿದೆ.
ದೇಶದಲ್ಲಿ ಕೊರೊನಾ ಮೊದಲ ಸಾವು ಸಂಭವಿಸಿದ ಜಿಲ್ಲೆ ಇದಾಗಿದೆ. ದೇಶದಲ್ಲಿ ಲಾಕ್ ಡೌನ್ ಘೋಷಣೆಗೆ ಒಂದು ವಾರ ಮೊದಲೇ ಲಾಕ್ ಡೌನ್ ಗೆ ತುತ್ತಾದ ಜಿಲ್ಲೆ ಕಲಬುರಗಿ. ಲಾಕ್ ಡೌನ್ ಘೋಷಣೆಯಿಂದ ರೈಲು ಸಂಚಾರ ನಿಂತೇ ಹೋಗಿತ್ತು. ಅನ್ ಲಾಕ್ ಘೋಷಿಸಿದ ಕೇಂದ್ರ ಸರಕಾರ ವಿಶೇಷ ರೈಲುಗಳನ್ನು ಆರಂಭಿಸಿತು. ಇದರಿಂದ ಹಮಾಲಿಗಳಿಗೆ ಅಷ್ಟೇನು ಪ್ರಯೋಜನವಾಗಿಲ್ಲ. ಪ್ರಯಾಣಿಕರ ಸಂಖ್ಯೆ ಕುಗ್ಗಿದ ಕಾರಣ ಲಗೇಜುಗಳನ್ನು ಹೊರಲು ಕೆಲಸವಿಲ್ಲದೆ ಪರದಾಡುವ ಸ್ಥಿತಿಯಲ್ಲಿದ್ದಾರೆ. ಇದರಿಂದ ಕೂಲಿಗಳ ಜೀವನ ರೈಲ್ವೆ ಹಳ್ಳಿಗೆ ಬಂದಿಲ್ಲ ಆರ್ಥಿಕ ಕೊರತೆಯಿಂದ ಇವರ ಸ್ಥಿತಿ ಶೋಚನೀಯವಾಗಿದೆ.
ಕೊರೊನಾ ಬರುವುದಕ್ಕಿಂತ ಮುಂಚೆ ದಿನವೊಂದಕ್ಕೆ ಸುಮಾರು 700 ರೂಪಾಯಿಗಳವರೆಗೆ ಸಂಪಾದನೆಯಾಗುತ್ತಿದ್ದದ್ದು, ಈಗ 200 ರೂಪಾಯಿವರೆಗೆ ಸಂಪಾದಿಸುವುದು ಕಷ್ಟವಾಗಿದೆ. ಸದ್ಯ ನಾವು ಏನು ಮಾಡಬೇಕೆಂದು ದಿಕ್ಕೇ ತೋಚದಂತಾಗಿದೆ ಎನ್ನುತ್ತಾರೆ ಹಮಾಲಿಗಳು.
ಸ್ನೇಹಿತರು ಸಂಬಂಧಿಗಳಿಂದ ಸಾಲವನ್ನು ಪಡೆದು ಜೀವನ ಸಾಗಿಸುವಂತಾಗಿದೆ. ಪಡೆದ ಸಾಲ ಹಿಂದಿರುಗಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳ ಮೂರು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ರೈಲ್ವೆ ಇಲಾಖೆ ನಮ್ಮ ಸಂಕಷ್ಟವನ್ನು ನಿವಾರಿಸಲು ನೆರವಿಗೆ ಬಂದರೆ ಅನುಕೂಲವಾಗುತ್ತದೆ. ನಮ್ಮೆಲ್ಲರ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಬೇಕು ಎಂಬುದು ಅವರ ಕಳಕಳಿಯ ಕೂಗು.
ಎಲ್ಲರ ಭಾರವನ್ನು ಹೊರುವ ನಮ್ಮಂತಹ ರೈಲ್ವೆ ಹಮಾಲಿಗಳ ಸ್ಥಿತಿಯ ಬಗ್ಗೆಯೂ ಸರಕಾರ ಗಮನ ಹರಿಸಲಿ. ಸರಕಾರ ಹಾಗೂ ಸಂಘ ಸಂಸ್ಥೆಗಳಿಂದ ನಮಗೆ ಯಾವುದೇ ರೀತಿಯ ಪರಿಹಾರ ಬಂದಿಲ್ಲ. ಸರಕಾರ ಪರಿಹಾರ ಘೋಷಿಸಲಿ ಅಥವಾ ಸಣ್ಣಪುಟ್ಟ ಉದ್ಯೋಗವಕಾಶ ಕಲ್ಪಿಸಿಕೊಡಲಿ. ನಮ್ಮನ್ನು ಕಡೆಗಣಿಸಿದರೆ ನಮ್ಮ ಪರಿಸ್ಥಿತಿಯು ಸಂಕಷ್ಟದಲ್ಲಿಯೇ ಸಿಲುಕಲಿದೆ ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡರು.
ಕೊರೊನಾ ಸಂಕಷ್ಟ ದೂರವಾಗಿ ಮೊದಲಿನಂತೆ ರೈಲು ಸಂಚಾರ ಆರಂಭಗೊಂಡರೆ ಮಾತ್ರ ಹಮಾಲಿಗಳ ಬದುಕು ಹಳಿಗೆ ಬರಲಿದೆ. ಅದುವರೆಗೆ ಅವರ ಕುಟುಂಬ ನಿರ್ವಹಣೆಗೆ ಅಗತ್ಯವಾದ ನೆರವನ್ನು ಕಲ್ಪಿಸಲು ಸರ್ಕಾರ ಮುಂದಾಗಬೇಕಿದೆ.