ಇನ್ನಷ್ಟು ಜಿಲ್ಲೆಗಳಿಗೆ ನವೋದಯ ಗುಂಪುಗಳ ವಿಸ್ತರಣೆ


ಬ್ರಹ್ಮಾವರ, ಜ.೧೧- ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ) ಮೂಲಕ ನವೋದಯ ಸ್ವಸಹಾಯ ಗುಂಪಿನವರಿಗೆ ಈಗಾಗಲೇ ಸ್ವಂತ ಉದ್ಯೋಗ ಮಾಡಲು ಕಡಿಮೆ ಬಡ್ಡಿದರಲದಲ್ಲಿ ೨೦ ಲಕ್ಷ ರೂ.ವರೆಗೆ ಯಾವುದೇ ಅಡಮಾನ ಇಲ್ಲದೇ ಸಾಲ ನೀಡಲಾಗುತಿದ್ದು, ನವೋದಯ ಗುಂಪುಗಳನ್ನು ಇನ್ನಷ್ಟು ಜಿಲ್ಲೆಗಳಿಗೆ ವಿಸ್ತರಿಸಲು ಬೇಡಿಕೆಗಳಿವೆ ಎಂದು ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ನಿರ್ದೇಶಕ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಬಾರಕೂರಿನ ಕಚ್ಚೂರು ಗ್ರಾಮದ ಬಾರ್ಕೂರು ಮುಖ್ಯರಸ್ತೆಯಲ್ಲಿರುವ ಕಟ್ಟಡದ ನೆಲ ಅಂತಸ್ತಿಗೆ ಸ್ಥಳಾಂತರಗೊಂಡ ಎಸ್‌ಸಿಡಿಸಿಸಿ ಬ್ಯಾಂಕ್ ಶಾಖೆಯನ್ನು ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿ ನವೋದಯ ಗುಂಪುಗಳು ಕಾರ್ಯ ನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಗಳಿಂದಲೂ ನವೋದಯ ಗುಂಪುಗಳನ್ನು ಪ್ರಾರಂಭಿಸಿ ಮಹಿಳೆಯನ್ನು ಸ್ವಾವಲಂಬಿಗಳನ್ನಾಗಿ ಮಾಡುವಂತೆ ಬೇಡಿಕೆ ಬಂದಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಲ್ಲಿ ಕೂಡಾ ನಮ್ಮ ನವೋದಯ ಗುಂಪುಗಳನ್ನು ಪ್ರಾರಂಭಿಸುವ ಯೋಜನೆ ಇದೆ. ನಮ್ಮ ರಾಜ್ಯದಲ್ಲಿ ಪ್ರತಿಯೊಬ್ಬ ಮನುಷ್ಯ ಸ್ವಾವಲಂಬಿಯಾಗಿ ಬದುಕಬೇಕೆನ್ನುವುದು ನಮ್ಮ ಆಸೆಯಾಗಿದೆ. ಕೃಷಿಯೊಂದಿಗೆ ಸಂಬಂಧವನ್ನು ಹೊಂದಿರುವ ನಮ್ಮೂರಿನ ಜಾನಪದ ಕ್ರೀಡೆ ಕಂಬಳಕ್ಕೆ ಹೊಸತನ ನೀಡಲು ಉದ್ದೇಶದಿಂದ ಕಂಬಳ ಕ್ಷೇತ್ರದ ಅಭಿವೃದ್ಧಿಗೆ ನಾವು ಕೈಜೋಡಿಸಿದ್ದೇವೆ ಎಂದು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಆಗಿರುವ ಡಾ.ರಾಜೇಂದ್ರ ಕುಮಾರ್ ತಿಳಿಸಿದರು. ಬ್ಯಾಂಕ್ ಲಾಕರ್‌ನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಾಲಪತ್ರಗಳಾದ ವಾಹನ ಸಾಲ, ಅಡವು ಸಾಲ, ಗೃಹ ಸಾಲ ಇವುಗಳನ್ನು ವಿತರಿಸಲಾಯಿತು. ಕಟ್ಟಡ ಮಾಲಕರಾದ ಸುಚಿತ್ರ ಶೆಟ್ಟಿ ಹಾಗೂ ಬಿ ಶಾಂತರಾಮ್ ಶೆಟ್ಟಿ ಇವರನ್ನು ಅಭಿನಂದಿಸಿ ಬಂಗಾರದ ಹಾರ ತೊಡಿಸಿ ಸನ್ಮಾನಿಸಲಾಯಿತು. ಇದೇ ವೇಳೆ ಕಂಬಳ ಅಭಿಮಾನಿಗಳಿಂದ ರಾಜೇಂದ್ರ ಕುಮಾರ್‌ರನ್ನು ಸನ್ಮಾನಿಸಲಾಯಿತು. ನಿರ್ದೇಶಕರಾದ ರಾಜು ಪೂಜಾರಿ, ಶಶಿಕುಮಾರ್ ರೈ. ಮುಳ್ಳಹಳ್ಳಿ ಮಹೇಶ್ ಹೆಗಡೆ, ರಾಜೇಶ್ ರಾವ್, ಅಶೋಕ್ ಕುಮಾರ್ ಶೆಟ್ಟಿ, ಬ್ಯಾಂಕಿನ ಜಿ.ಎಂ. ಗೋಪಾಲಕೃಷ್ಣ, ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆಯ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಕರ್ಜೆ, ಶಿರಿಯರ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪ್ರದೀಪ್ ಬಲ್ಲಾಳ್, ಉಪ್ಪೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಹೆಗಡೆ, ಕೊಡವೂರು ಸಿ ಎ ಬ್ಯಾಂಕ್ ಅಧ್ಯಕ್ಷ ನಾರಾಯಣ ಬಲ್ಲಾಳ್, ಕೆಮ್ಮಣ್ಣು ಸಿ ಎ ಬ್ಯಾಂಕಿನ ಅಧ್ಯಕ್ಷ ಸತೀಶ್, ಮಂದರ್ತಿ ಸಿ ಎ ಬ್ಯಾಂಕಿನ ಅಧ್ಯಕ್ಷ ಗಂಗಾಧರ ಶೆಟ್ಟಿ, ಕೋಟ ಸಿ ಎ ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ, ಶಾಖಾ ವ್ಯವಸ್ಥಾಪಕ ಹಿರಿಯಣ್ಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳೊಂದಿಗೆ ಎಸ್‌ಸಿಡಿಸಿಸಿ ಬ್ಯಾಂಕ್ ಇದುವರೆಗೆ ನಡೆದು ಬಂದ ದಾರಿಯನ್ನು, ಅದರ ಸಾಧನೆಯನ್ನೂ ವಿವರಿಸಿದರು. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರೆ, ನಿರ್ದೇಶಕ ಅಶೋಕ್ ಕುಮಾರ್ ವಂದಿಸಿದರು.