ಸಂಜೆವಾಣಿ ವಾರ್ತೆ
ಹಿರಿಯೂರು ಜು. 15- ನಗರದ ಹರಿಶ್ಚಂದ್ರ ಬಡಾವಣೆಯಲ್ಲಿರುವ ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿ ಇನ್ನರ್ವಿಲ್ ಕ್ಲಬ್ ವತಿಯಿಂದ ಕಸದಿಂದ ರಸ ಎಂಬ ಕಾರ್ಯಕ್ರಮ ನಡೆಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಮನೆಯಲ್ಲಿ ಉಳಿದಿರುವ ತರಕಾರಿ ಸಿಪ್ಪೆಗಳಿಂದ ಹಾಗೂ ಕೊಳೆತ ಹಣ್ಣುಗಳಿಂದ ಗಿಡದ ಎಲೆಗಳಿಂದ ಗೊಬ್ಬರ ತಯಾರಿಸುವ ವಿಧಾನದ ಬಗ್ಗೆ ಇನ್ನರ್ವೀಲ್ ಎಡಿಟರ್ ಸೌಮ್ಯ ಪ್ರಶಾಂತ್ ರವರು ತಿಳಿಸಿಕೊಟ್ಟರು. ಖಜಾಂಚಿ ಸುಚಿತ್ರ ಅಮರನಾಥ್ ರವರು ಆರ್ಗ್ಯಾನಿಕ್ ಗೊಬ್ಬರವನ್ನು ಬಳಸುವುದರಿಂದ ಉತ್ತಮ ಆರೋಗ್ಯ ಹೊಂದಬಹುದು ನಮಗೆ ಬೇಕಾದ ತರಕಾರಿ ಸೊಪ್ಪುಗಳನ್ನು ಮನೆಯ ಮುಂದಿನ ಸಣ್ಣ ಜಾಗದಲ್ಲೇ ಹೇಗೆ ಬೆಳೆಸಿಕೊಳ್ಳಬಹುದು ಹಾಗೂ ಅದಕ್ಕೆ ಬೇಕಾದ ಗೊಬ್ಬರವನ್ನು ಮನೆನಲ್ಲಿ ಉಳಿದಿರುವ ತರಕಾರಿ ಸಿಪ್ಪೆಗಳಿಂದ ತಯಾರಿಸಿಕೊಳ್ಳುವ ಬಗ್ಗೆ ಹೇಳಿದರು. ಮಾಜಿ ಅಧ್ಯಕ್ಷ ರಾದ ಸರ್ವ ಮಂಗಳಾರವರು ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕೆಂದು ತಿಳಿಸಿದರು. ಅಧ್ಯಕ್ಷರಾದ ಲಕ್ಷ್ಮೀ ರಾಜೇಶ್ ರವರು ಕಸದಿಂದ ರಸವನ್ನು ಅಂದರೆ ಉಪಯೋಗಿಸಲು ಯೋಗ್ಯವಲ್ಲದ ವಸ್ತುಗಳನ್ನು ಬಿಸಾಡದೆ ಉಪಯುಕ್ತ ವಾಗುವಂತೆ ಮಾಡಿಕೊಳ್ಳುವ ಬಗ್ಗೆ ಹಾಗೂ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಹಾಸ್ಟಲ್ ನ ವಾರ್ಡನ್ ಗೀತಾ, ಹಾಗೂ ಇನ್ನರ್ವಿಲ್ ಸದಸ್ಯರಾದ ಪದ್ಮ , ರೂಪ, ಶ್ವೇತಾ, ಗೀತಾ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಾಸ್ಟೆಲ್ ಗೆ ಉಪಯೋಗವಾಗುವಂತೆ ಕೈತೋಟದಲ್ಲಿ ನಿಂಬೆಗಿಡ ಹಾಗೂ ತರಕಾರಿ ಸಸ್ಯಗಳನ್ನು ಇನ್ನರ್ ವೀಲ್ ಕ್ಲಬ್ ನ ಕಡೆಯಿಂದ ಕೊಡುಗೆಯಾಗಿ ನೀಡಿದರು.