ಇನಾಮು ಭೂಮಿ ಅಕ್ರಮ ವರ್ಗಾವಣೆ

ದೇವದುರ್ಗ.ಮಾ.೨೩- ತಾಲೂಕಿನ ಮಿಯ್ಯಾಪುರ ಸೀಮಾಂತರದ ಸರ್ವೇ ನಂಬರ್ ೫೮//ರಲ್ಲಿನ ೪.೨೦ ಎಕರೆ ಇನಾಮು ಭೂಮಿಯನ್ನು ತಾಪಂ ಅಧ್ಯಕ್ಷ ಹನುಮಂತ ಕಟ್ಟಿಮನಿ ಮಿಯ್ಯಾಪುರ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಹೊಲದ ಮಾಲೀಕ ಮಲ್ಲಿಕಾರ್ಜುನ ಭೀಮೇಶಪ್ಪ ಆರೋಪಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ಹಲವು ವರ್ಷಗಳಿಂದ ತಮ್ಮ ಕುಟುಂಬ ಪೂಜಾರಿ ಕೆಲಸ ಮಾಡುತ್ತಿದೆ. ಗ್ರಾಮಸ್ಥರು ಹಲವು ವರ್ಷಗಳ ಹಿಂದೆ ನಮ್ಮ ಕುಟುಂಬಕ್ಕೆ ಸರ್ವೇ ನಂಬರ್ ೫೮//ರ ೪.೨೦ ಎಕರೆ ಇನಾಮು ಭೂಮಿಯಾಗಿ ನೀಡಿದ್ದಾರೆ. ಈ ಭೂಮಿಯಲ್ಲಿ ನಮ್ಮ ಕುಟುಂಬಕ್ಕೆ ಮಾಲೀಕರು ಹಾಗೂ ಅನುಭೋಗದಾರರು ಆಗಿದ್ದೇವೆ.
ನಮ್ಮ ತಂದೆಗೆ ದಿ.ಹನುಮಂತಪ್ಪ ಭೀಮೇಶಪ್ಪ, ಪ್ಯಾಟೇಪ್ಪ ಭೀಮೇಶಪ್ಪ ಹಾಗೂ ಮಲ್ಲಿಕಾರ್ಜುನ ಭೀಮೇಶಪ್ಪ ಮೂವರು ಮಕ್ಕಳಿದ್ದೇವೆ. ಸದರಿ ಇನಾಮಿ ಭೂಮಿ ನಮಗೆ ಸೇರಬೇಕಿದೆ. ಆದರೆ, ತಾಪಂ ಅಧ್ಯಕ್ಷ ಹನುಮಂತ ಕಟ್ಟಿಮನಿ ನಕಲಿ ದಾಖಲೆ ಹಾಗೂ ವಂಶಾವಳಿಯನ್ನು ನನ್ನ ಸಹೋದರ ಹನುಮಂತಪ್ಪ ಭೀಮೇಶಪ್ಪನ ಹೆಸರಿನಲ್ಲಿ ತಯಾರಿಸಿ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ.
ಅಕ್ರಮವಾಗಿ ಜಮೀನು ವರ್ಗಾವಣೆ ಮಾಡಿಕೊಂಡ ಹನುಮಂತಪ್ಪ ಕಟ್ಟಮನಿಗೂ ನಮ್ಮ ತಂದೆಗೂ ಯಾವುದೇ ಸಂಬಂಧವಿಲ್ಲ. ಜಾತಿ ಕೂಡ ಬೇರೆಯಾಗಿದ್ದು, ನಾವು ಹೂಗಾರ್ ಆಗಿದ್ದರೆ, ಹನುಮಂತಪ್ಪ ಕಟ್ಟಿಮನಿ ಎಸ್‌ಸಿಗೆ ಸೇರಿದ್ದಾರೆ. ಆದರೂ ಸುಳ್ಳು ದಾಖಲೆ ಸೃಷ್ಟಿಸಿ, ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದರೆ, ಬೆದರಿಸುವ ತಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಮಧ್ಯ ಪ್ರವೇಶ ಮಾಡಿ, ನಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಇನಾಮು ಭೂಮಿ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡ ತಾಪಂ ಅಧ್ಯಕ್ಷ ಹನುಮಂತಪ್ಪ ಕಟ್ಟಿಮನಿ ವಿರುದ್ಧ ಕ್ರಮ ಕೈಗೊಂಡು, ಅಕ್ರಮ ವರ್ಗಾವಣೆ ರದ್ದುಪಡಿಸಬೇಕು ಎಂದು ಆಗ್ರಹಿಸಿದರು