ಇದ್ದ ಗಾರ್ಡನ್ ಅಭಿವೃದ್ಧಿ ಪಡಿಸದೇ, ಹಣ ಕೊಳ್ಳೆ ಹೊಡೆಯುವ ಹುನ್ನಾರವೇ..?

ಐತಿಹಾಸಿಕ ಕೆರೆಗೆ ಮಣ್ಣುಮುಚ್ಚಿ ಉದ್ಯಾನವನ ಮಾಡುವ ಅಗತ್ಯವೇನು..?
ದುರುಗಪ್ಪ ಹೊಸಮನಿ

ಲಿಂಗಸುಗೂರು.ಡಿ.೨೨-ಐತಿಹಾಸಿಕ ಕರಡಕಲ್ ಬಿಲ್ಲಮರಾಜ ನಿರ್ಮಾಣ ಮಾಡಿದ್ದರೆನ್ನಲಾಗುವ ಕೆರೆಯು ನೂರಾರು ಎಕರೆಯಲ್ಲಿ ವಿಸ್ತಾರವಾಗಿದೆ. ವರ್ಷದ ಹನ್ನೆರಡು ತಿಂಗಳೂ ತುಂಬಿರುವ ಕೆರೆಯ ದಕ್ಷಿಣ ಭಾಗದ ಕಡೆಗೆ ಮಣ್ಣು ಹಾಕಿ ಮುಚ್ಚುವ ಮೂಲಕ ಗಾರ್ಡನ್ ಅಭಿವೃದ್ಧಿ ಮಾಡುತ್ತೇವೆಂದು ಹೇಳಿಕೊಂಡು ಸಾರ್ವಜನಿಕರ ಹಣವನ್ನು ಕೊಳ್ಳೆ ಹೊಡೆಯುವ ಹುನ್ನಾರ ಆಡಳಿತ ನಡೆಸಿದೆಯೇ..? ಎನ್ನುವ ಪ್ರಶ್ನೆಗಳೀಗ ಕಾಡತೊಡಗಿವೆ.
ಡಿವೈಎಸ್‌ಪಿ ಕಚೇರಿ ಮುಂಭಾಗದ ತಿರುವಿನಲ್ಲಿ ಕೆರೆಯ ನೀರಲ್ಲಿ ಟಿಪ್ಪರ್‌ಗಳಿಂದ ಮಣ್ಣು, ಮರಮ್ ಹಾಕಿ ಮುಚ್ಚಲಾಗುತ್ತಿದೆ. ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಇಲಾಖೆ ವತಿಯಿಂದ ೨ ಕೋಟಿ ರೂಪಾಯಿ ಎಸ್ಟಿಮೇಟೆಡ್ ಅನುದಾನದಿಂದ ‘ಪಟ್ಟಣದ ಹೃದಯಭಾಗದಲ್ಲಿ ಟ್ಯಾಂಕ್ ಅಭಿವೃದ್ಧಿ’ ಹೆಸರಿನಡಿ ಟೆಂಡರ್ ಆಗಿರುವ ಕಾಮಗಾರಿ ಇದಾಗಿದ್ದು, ಕೆರೆಯ ನೀರಿಗೆ ಮಣ್ಣು ಹಾಕುತ್ತಿರುವುದು ಸಾರ್ವಜನಿಕರು, ನಾನಾ ಪ್ರಗತಿಪರ ಸಂಘಟಕರ ಅಸಮಧಾನಕ್ಕೆ ಕಾರಣವಾಗಿದೆ.
೨೦೧೯-೨೦ನೇ ಸಾಲಿನ ಕೆಕೆಆರ್‌ಡಿಬಿ ಅನುದಾನದಲ್ಲಿ ಈ ಕಾಮಗಾರಿಗೆ ಹಣವನ್ನು ಮೀಸಲಿಡಲಾಗಿದೆ. ೧.೮೧ ಕೋಟಿ ರೂಪಾಯಿ ವೆಚ್ಚದಲ್ಲಿ ಟೆಂಡರ್ ಪಡೆದು ಸ್ಥಳೀಯ ಪ್ರಥಮ ದರ್ಜೆ ಗುತ್ತೇದಾರ ಅಮರಗುಂಡಪ್ಪ ಮೇಟಿಯವರು ಕೆಲಸ ಆರಂಭಿಸಿದ್ದಾರೆ. ಡಿ.೩ ರಿಂದ ಆರಂಭವಾಗಿರುವ ಕೆಲಸ ಭರದಿಂದ ಸಾಗಿದೆ. ಹೆದ್ದಾರಿಗೆ ಹೊಂದಿಕೊಂಡು ಇರುವ ಕೆರೆಗೆ ಮಣ್ಣು ಮುಚ್ಚಿ ಅಭಿವೃದ್ಧಿ ಪಡಿಸುವುದು ಯಾವ ಪುರುಷಾರ್ಥಕ್ಕೆ ಎನ್ನುವುದೀಗ ಸಾರ್ವಜನಿಕರ ಪ್ರಶ್ನೆಯಾಗಿದೆ. ಇದಕ್ಕೆ ಆಡಳಿತವೇ ಉತ್ತರಿಸಬೇಕು.
ಕಳೆದ ಆರೇಳು ವರ್ಷಗಳ ಹಿಂದೆ ಸುಮಾರು ೫೫ ಲಕ್ಷ ರೂಪಾಯಿ ವಚ್ಚದಲ್ಲಿ ಇದೇ ಕೆರೆಯ ದಡದಲ್ಲಿ ಹೈಟೆಕ್ ಉದ್ಯಾನವನದ ಕಾಮಗಾರಿ ಆರಂಭಿಸಲಾಗಿತ್ತು. ಭೂಸೇನಾ ಮತ್ತು ಕ್ಯಾಶಿಯೊಟೆಕ್ ಇಲಾಖೆಗಳಿಗೆ ಈ ಕಾಮಗಾರಿಯ ನಿರ್ವಹಣೆ ವಹಿಸಲಾಗಿತ್ತು. ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಕೆಲ ಮಕ್ಕಳ ಸಾಮಗ್ರಿಗಳನ್ನು ಅಳವಡಿಸಿ, ಅಲ್ಲಲ್ಲಿ ಕಳಪೆ ಸಾಮಗ್ರಿಗಳನ್ನು ಹಾಕಿದ್ದು ಬಿಟ್ಟರೆ ಉದ್ಯಾವನ ದನ ಮೇಯುವ ತಾಣವಾಗಿದೆ. ಈ ಬಗ್ಗೆ ಮಾಧ್ಯಮಗಳು ಸಾಕಷ್ಟು ಬಾರಿ ವರದಿಗಳನ್ನು ಪ್ರಕಟಿಸಿದಾಗ್ಯೂ ಆಡಳಿತ ಮಾತ್ರ ಕ್ಯಾರೇ ಎನ್ನದೇ, ಈಗ ಮತ್ತೊಂದು ಬಾರಿ ಸರಕಾರದ ಹಣ ದುರ್ಬಳಕೆಗೆ ಸಜ್ಜಾಗಿ ನಿಂತಂತೆ ಕಾಣುತ್ತಿದೆ.
ಪುರಸಭೆ ವ್ಯಾಪ್ತಿಯಲ್ಲಿ ಬರುವ ಕೆರೆಯ ಅಭಿವೃದ್ಧಿಗೆ ಹಿಂದೆ ಇದ್ದ ಅಧಿಕಾರಿಗಳು ಹಲವು ಬಾರಿ ಕ್ರಿಯಾಯೋಜನೆಗಳನ್ನು ರಚಿಸಿದ್ದರು. ಬೋಟಿಂಗ್, ಗಾರ್ಡನಿಂಗ್ ಎಂದು ಲಕ್ಷಗಟ್ಟಲೇ ಹಣವನ್ನು ಖರ್ಚು ಹಾಕಿ ಉಂಡು ತೇಗಿದ್ದೂ ಆಗಿದೆ. ಸಾರ್ವಜನಿಕರಿಗೆ ಪಟ್ಟಣದಲ್ಲಿ ಓಡಾಡಲು ಸರಿಯಾದ ರಸ್ತೆಗಳು ಇಲ್ಲ. ಚರಂಡಿ ವ್ಯವಸ್ಥೆ ಅಸ್ಥವ್ಯಸ್ಥವಾಗಿದೆ. ಜನರಿಗೆ ಸರಿಯಾಗಿ ಕುಡಿಯುವ ನೀರಿನ ಸರಬರಾಜು ಆಗುತ್ತಿಲ್ಲ. ಈ ಬಗ್ಗೆ ಗಮನ ಹರಿಸುವುದು ಬಿಟ್ಟು ಆಡಳಿತ ಏಕಾಏಕಿಯಾಗಿ ಅಭಿವೃದ್ಧಿ ಹೆಸರಿನಲ್ಲಿ ಸರಕಾರದ ಕೋಟಿಗಟ್ಟಲೇ ಹಣವನ್ನು ಕೊಳ್ಳೆ ಹೊಡೆಯಲು ಸಂಚು ಹೂಡಿದೆಯೇ ಎನ್ನುವ ಅನುಮಾನಗಳು ದಟ್ಟವಾಗಿ ಹುಟ್ಟಿಕೊಂಡಿವೆ. ಅಷ್ಟಕ್ಕೂ ಈ ಕಾಮಗಾರಿಯ ಜರೂರತ್ತಾದರೂ ಏನಿತ್ತು ಎನ್ನುವ ಜನರ ಪ್ರಶ್ನೆಗಳಿಗೆ ಆಡಳಿತವೇ ಉತ್ತರ ನೀಡಬೇಕಿದೆ.

೨೨ಎಲ್‌ಎನ್‌ಜಿ-೨. ಕೆರೆಯ ನೀರಲ್ಲಿ ಮಣ್ಣು ಹಾಕುತ್ತಿರುವುದು.