ಇದೇ ೨೦ ರಿಂದ ಮಂತ್ರಾಲಯ ತುಂಗಭದ್ರಾ ಪುಷ್ಕರಣಿ

ಮಂತ್ರಾಲಯ, ನ ೬- ರಾಘವೇಂದ್ರ ಸ್ವಾಮಿ ಸನ್ನಿಧಿಯ ತುಂಗಭದ್ರಾ ನದಿ ತೀರದಲ್ಲಿ ಇದೇ ತಿಂಗಳ ೨೦ ರಿಂದ ಬರುವ ಡಿಸೆಂಬರ್ ೧ ರವರೆಗೆ “ಮಂತ್ರಾಲಯ ತುಂಗಭದ್ರಾ ಪುಷ್ಕರಣಿ” ಯೋಜಿಸಲಾಗಿದೆ.
ಕೋವಿಡ್ ೧೯ ಸೋಂಕು ನಿಯಂತ್ರಣ ಕ್ರಮಗಳ ನಡುವೆಯೂ ದೇಶ-ವಿದೇಶಗಳ ೨೫ ಸಾವಿರ ಭಕ್ತಾಧಿಗಳು ಈ ಪುಷ್ಕರಣಿಯಲ್ಲಿ ಭಾಗವಹಿಸಿ ಪುಣ್ಯ ಸ್ನಾನ ಮಾಡುವ ನಿರೀಕ್ಷೆಯಿದೆ. ಇದಕ್ಕಾಗಿ ಆರೋಗ್ಯ ಇಲಾಖೆಯಿಂದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದ್ದಾರೆ.
ಸೋಂಕು ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಉದ್ದೇಶದಿಂದ ವಿಶೇಷ ಆರೋಗ್ಯ ತಂಡಗಳನ್ನು ನಿಯೋಜಿಸಲಾಗುತ್ತಿದೆ. ಜತೆಗೆ ಜನ ಜಂಗುಳಿ ನಿಯಂತ್ರಿಸಲು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪೊಲೀಸ್ ಇಲಾಖೆಯಿಂದ ಸಕಲ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಮಠದಿಂದ ನದಿ ತಟದಲ್ಲಿ ಸ್ನಾನ ಘಟ್ಟ ನಿರ್ಮಿಸಿದ್ದು, ಆಂಧ್ರ ಪ್ರದೇಶ ಸರ್ಕಾರ ಸಹ ೫ ಕಡೆ ಪುಷ್ಕರಣಿ ಸ್ನಾನದ ವ್ಯವಸ್ಥೆ ಮಾಡಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ