ಇದು ಹೃದಯಗಳ ವಿಷಯ: ವಿಶ್ವ ಹೃದಯ ದಿನ

ಹೃದಯದ ಆರೋಗ್ಯದ ಕಾಳಜಿಯ ಅರಿವನ್ನು ಜನಸಾಮಾನ್ಯರಿಗೆ ಮೂಡಿಸಲು ವಿಶ್ವಮಟ್ಟದಲ್ಲಿ ನಡೆಯುವ ವಿಶ್ವ ಹೃದಯ ದಿನವನ್ನು ಸೆಪ್ಟೆಂಬರ್ 29 ರಂದು ಆಚರಿಸಲಾಗುತ್ತಿದೆ. ವರ್ಲ್ಡ್ ಹಾರ್ಟ್ ಫೆಡರೇಶನ್ (ಡಬ್ಲ್ಯುಎಚ್‌ಎಫ್) ಅಂತಾರಾಷ್ಟ್ರೀಯ ಅಭಿಯಾನವಾಗಿ ಪ್ರತಿ ವರ್ಷ ಸೆ.29ರಂದು ವಿಶ್ವ ಹೃದಯ ದಿನವನ್ನು ಆಯೋಜಿಸುತ್ತದೆ.

ಹೃದಯದ ಕಾಳಜಿಯ ಕಾರ್ಯಕ್ರಮಗಳು ಹಲವಾರು ವರ್ಷಗಳಿಂದ ನಡೆಯುತ್ತಾ ಬಂದಿದ್ದರೂ 2000ನೇ ಇಸವಿಯಲ್ಲಿ ಮೊದಲ ಬಾರಿಗೆ ವಿಶ್ವಮಟ್ಟದ ಬೃಹತ್ ಅಭಿಯಾನದ ರೂಪದಲ್ಲಿ ವಿಶ್ವ ಆರೋಗ್ಯ ದಿನವನ್ನು ಪ್ರಾರಂಭಿಸಲಾಯಿತು. ಹೆಸರೇ ತಿಳಿಸುವಂತೆ ಸಮಾಜದಲ್ಲಿರುವ ಎಲ್ಲಾ ವರ್ಗಗಳ ಜನತೆಗೆ ಹೃದಯದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮೂಡಿಸುವುದು ಹಾಗೂ ಹೃದಯಸ್ತಂಭನ, ಹೃದಯಾಘಾತ ಮೊದಲಾದವುಗಳ ಬಗ್ಗೆ ಸೂಕ್ತ ಮಾಹಿತಿ ಒದಗಿಸುವುದು ಹಾಗೂ ಇವುಗಳಿಂದ ರಕ್ಷಣೆ ಪಡೆಯಲು ಸೂಕ್ತ ಕ್ರಮ ಹಾಗೂ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಜನತೆಗೆ ಶಿಕ್ಷಣ ನೀಡುವುದೂ ಈ ದಿನಾಚರಣೆಯ ಉದ್ದೇಶವಾಗಿದೆ.

ವಿಶ್ವ ಹೃದಯ ದಿನಾಚರಣೆಯನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಜೊತೆ ಒಗ್ಗೂಡಿ ವಿಶ್ವ ಹೃದಯ ಒಕ್ಕೂಟ (ಡಬ್ಲ್ಯುಎಚ್‌ಎಫ್) 1999ರಲ್ಲಿ ಆರಂಭಿಸಿತು. ಈ ದಿನದ ಮೂಲ ಕಲ್ಪನೆಯನ್ನು 1997-1999ರವರೆಗೆ ವರ್ಲ್ಡ್ ಹಾರ್ಟ್ ಫೆಡರೇಶನ್ (ಡಬ್ಲ್ಯುಎಚ್‌ಎಫ್) ಅಧ್ಯಕ್ಷ ಆಂಟೋನಿ ಬೇಯ್ಸ್ ಡಿ ಲೂನಾ ಹೊಂದಿದ್ದರು. ಮೊದಲು ವಿಶ್ವ ಹೃದಯ ದಿನವನ್ನು ಸೆಪ್ಟೆಂಬರ್ ಕೊನೆಯ ಭಾನುವಾರ (2011 ರವರೆಗೆ) ಆಚರಿಸಲಾಗುತ್ತಿತ್ತು. ಈ ಕ್ರಮ ಸುಮಾರು 2010ರ ವರೆಗೂ ಮುಂದುವರೆಯಿತು. 2011 ರಿಂದ ಈ ದಿನವನ್ನು ಕೊನೆಯ ಭಾನುವಾರದ ಕಟ್ಟುಪಾಡಿನಿಂದ ಮುಕ್ತಗೊಳಿಸಿ ಖಚಿತ ದಿನವಾಗಿ 29 ತಾರೀಖಿಗೆ ನಿಗದಿಗೊಳಿಸಲಾಯಿತು.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅಂದಾಜಿನ ಪ್ರಕಾರ ಪ್ರತಿವರ್ಷ 17.9 ದಶಲಕ್ಷಕ್ಕೂ ಹೆಚ್ಚು ಜನರು ಹೃಯದ ಸಂಬಂಧಿ ಕಾಯಿಲೆಗಳಿಂದ ಸಾಯುತ್ತಿದ್ದಾರೆ. ಇದು ಜಾಗತಿಕ ಸಾವಿನಲ್ಲಿ ಶೇ.31ಕ್ಕಿಂತ ಹೆಚ್ಚು ಇದೆ. ಸುಮಾರು 80 ಪ್ರತಿಶತದಷ್ಟು ಜನರು ಹೃದಯಾಘಾತ ಅಥವಾ ಪಾರ್ಶ್ವವಾಯುವಿನಿಂದ ಸಾಯುತ್ತಿದ್ದಾರೆ. ಶೇ. 75ರಷ್ಟು ಪ್ರಕರಣಗಳು ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಿಂದ ವರದಿಯಾಗಿವೆ.

ವಿಶ್ವ ಹೃದಯ ಒಕ್ಕೂಟದ ಪ್ರಕಾರ, ಅನಾರೋಗ್ಯಕರ ಆಹಾರ, ತಂಬಾಕು ಬಳಕೆ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಆಲ್ಕೋಹಾಲ್ ಬಳಕೆಯಂತಹ ನಾಲ್ಕು ಪ್ರಮುಖ ಅಪಾಯಕಾರಿ ಅಂಶಗಳನ್ನು ನಿಯಂತ್ರಿಸುವ ಮೂಲಕ ಕನಿಷ್ಠ 80% ಅಕಾಲಿಕ ಮರಣಗಳನ್ನು (ಹೃದಯ ಸಂಬಂಧಿ ಕಾಯಿಲೆಗಳಿಂದಾಗಿ) ರಕ್ಷಿಸಬಹುದು. ವಿಶ್ವ ಹೃದಯ ದಿನದ ಅಭಿಯಾನದಲ್ಲಿ ಜನಸಾಮಾನ್ಯರೂ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಹೃದಯ ಸಂಬಂಧಿತ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವು ಪಡೆಯುತ್ತಾರೆ ಹಾಗೂ ಅಕಾಲಿಕವಾಗಿ ಸಂಭವಿರುವ ಸಾವು ಎದುರಾಗದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸುತ್ತಾರೆ. ಸಿವಿಡಿ (ಕಾರ್ಡಿಯೋ ವ್ಯಾಸ್ಕುಲರ್ ಡಿಸೀಸ್ ಅಥವಾ ಹೃದಯ ನಾಳಗಳ ಕಾಯಿಲೆ-ವಿಶ್ವದಲ್ಲಿ ಅತಿ ಹೆಚ್ಚಿನ ಸಾವುಗಳಿಗೆ ಕಾರಣವಾಗಿದೆ) ಬಗ್ಗೆ ಜಾಗೃತಿ ಮೂಡಿಸಲು ವಿಶ್ವದಾದ್ಯಂತ ಸರ್ಕಾರೇತರ ಸಂಸ್ಥೆಗಳೂ ಸೇರಿದಂತೆ ವಿವಿಧ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.

ಈ ದಿನವನ್ನು ವಿಶ್ವ ಹೃದಯ ಒಕ್ಕೂಟ ಸಂಸ್ಥೆ ಪ್ರಾರಂಭಿಸಿದ್ದು ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಸಹಕಾರ ನೀಡುತ್ತಿದೆ. ಇವೆರಡೂ ದಿಗ್ಗಜ ಸಂಸ್ಥೆಗಳು ವಿಶ್ವಮಟ್ಟದಲ್ಲಿ ಕಾರ್ಯನಿರ್ವಹಿಸುವ ಮೂಲಕ ಈ ಅಭಿಯಾನವನ್ನು ವಿಶ್ವಮಟ್ಟದಲ್ಲಿ ಯಶಸ್ವಿಯಾಗಿ ನಡೆಸಲು ಸಾಧ್ಯವಾಗುತ್ತಿದೆ. 2025 ಇಸವಿಯಲ್ಲಿ ಈ ಸಾವುಗಳ ಸಂಖ್ಯೆಯನ್ನು ಗಣನೀಯ ಮಟ್ಟಕ್ಕೆ ಇಳಿಸುವುದು ಈ ಅಭಿಯಾನದ ಧ್ಯೇಯೋದ್ದೇಶವಾಗಿದೆ.

ಹೃದಯ ಸಂಬಂಧಿ ಕಾಯಿಲೆಗಳಿಂದ ಉಂಟಾಗುವ ಸಾವಿನ ಪ್ರಮಾಣವು 1990 ಮತ್ತು 2016 ರ ನಡುವೆ ಯುಎಸ್​​ನಲ್ಲಿ ಗಮನಾರ್ಹವಾಗಿ ಶೇ.41ರಷ್ಟು ಕಡಿಮೆಯಾಗಿದೆ.ಭಾರತದಲ್ಲಿ ಅದೇ ಅವಧಿಯಲ್ಲಿ ಒಂದು ಲಕ್ಷ ಜನಸಂಖ್ಯೆಗೆ ಇದು 115.7 ರಿಂದ 209.1 ಸಾವುಗಳಿಗೆ ಕಾರಣವಾಗಿದೆ. ಅಂದರೆ, ಶೇ.34ರಷ್ಟು ಏರಿಕೆಯಾಗಿದೆ..ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆ ಏರಿಕೆಗೆ ಕಾರಣ ಆನುವಂಶಿಕ ಅಂಶಗಳು, ಭ್ರೂಣದ ಪ್ರೋಗ್ರಾಮಿಂಗ್ ಮತ್ತು ಇತರ ಆರಂಭಿಕ ಜೀವನದ ಪ್ರಭಾವಗಳಂತಹ ಜೈವಿಕ ಅಪಾಯಗಳನ್ನು ಒಳಗೊಂಡಿರುವ ಅನೇಕ ಕಾರ್ಯವಿಧಾನಗಳು ಕಾರಣವೆಂದು ಹೇಳಲಾಗಿದೆ. ಕ್ಷಿಪ್ರ ಸಾಂಕ್ರಾಮಿಕ ರೋಗ ಪರಿವರ್ತನೆ, ಕ್ಷಿಪ್ರ ಮತ್ತು ಯೋಜಿತವಲ್ಲದ ನಗರೀಕರಣ, ಬದಲಾಗುತ್ತಿರುವ ಜೀವನಶೈಲಿಯಂತಹ ಸಾಮಾಜಿಕ ಅಂಶಗಳಿಂದ ಇದು ಹೆಚ್ಚಾಗುತ್ತಿದೆ.