ಇದು ರಿವರ್ಸ್ ಗೇರ್ ಸರ್ಕಾರ

ಹುಬ್ಬಳ್ಳಿ, ಮೇ೨೫: ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹರಿಹಾಯ್ದರು.
ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾಗಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಅಧಿಕಾರ ಬಂದಾಗ ಸ್ವೇಚ್ಛಾಚಾರದೊಡನೆ, ಎಲ್ಲವನ್ನೂ ಬದಲಾವಣೆ ಮಾಡುತ್ತೇವೆ ಎನ್ನುವುದು ದುರಹಂಕಾರದ ಮಾತು ಎಂದ ಅವರು, ಇದು ರಿವರ್ಸ್ ಗೇರ್ ಸರ್ಕಾರ, ಅವರ ಗ್ಯಾರಂಟಿ ಕುರಿತಂತೆಯೂ ರಿವರ್ಸ್ ಹೋಗುತ್ತಿದ್ದಾರೆ ಎಂದು ಕುಟುಕಿದರು.
ನಾವು ಮಾಡಿದ ಕಾನೂನುಗಳ ವಿಷಯದಲ್ಲೂ ರಿವರ್ಸ್ ಹೋಗುತ್ತಿದ್ದಾರೆ, ಇದು ಸೇಡಿನ ಕ್ರಮ ಎಂದು ಬೊಮ್ಮಾಯಿ ಆಕ್ರೋಶ ಹೊರಹಾಕಿದರು.
ಸಾರ್ವಜನಿಕರಿಗೆ ಅನ್ಯಾಯವಾದರೆ ಕಾನೂನಾತ್ಮಕವಾಗಿ, ರಾಜಕೀಯವಾಗಿ ನಾವು ಹೋರಾಟ ಮಾಡುತ್ತೇವೆ ಎಂದ ಅವರು, ಸಾರ್ವಜನಿಕರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.