ಇದು ಭಾವೈಕ್ಯತೆಯ ಕವಿಗೋಷ್ಠಿ: ಡಾ.ಇಂಚರ

ಕೋಲಾರ,ಜ.೨: ಸಾಹಿತ್ಯ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಯುವ ಬರಹಗಾರರ ಒಕ್ಕೂಟ ಸೃಜನಾತ್ಮಕ ಚಟುವಟಿಕೆಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಕವಿ ಡಾ. ಇಂಚರ ನಾರಾಯಣಸ್ವಾಮಿ ಅವರು ಅಭಿಪ್ರಾಯ ಪಟ್ಟರು. ಕೋಲಾರ ನಗರದ ರಹಮತ್ ನಗರದಲ್ಲಿ ಜಿಲ್ಲಾ ಯುವ ಬರಹಗಾರರ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಮನೆಗೊಂದು ಕವಿಗೋಷ್ಠಿಯಲ್ಲಿ ಸನ್ಮಾನಿಸಿ ಮಾತನಾಡಿದರು ಜಾತಿ ಮತ ಪಂಥಗಳ ಆಚೆಗೆ ನಮ್ಮ ಭಾವನೆಗಳು ಒಂದಾಗಬೇಕು ಎಂದರು. ಆಗಾಗ ಇಂತಹ ಕವಿಗೋಷ್ಠಿಗಳು ನಡೆದು ಕವಿಗಳಲ್ಲಿ ಬೇಧ ಭಾವಗಳನ್ನು ಮರೆಯಿಸಿ ಸಮಸಮಾಜದ ಆಶಯಗಳನ್ನು ಬಿತ್ತುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ಯಶಸ್ವಿಯಾಗಬೇಕೆಂದರು.
ಬಿ.ಆರ್.ಸಿ ಟಿ.ಎಂ ನಾಗರಾಜ ಅವರು ಮಾತಾನಾಡಿ ಹೊಸ ವರ್ಷದ ಆರಂಭದ ಹಿಂದಿನ ದಿನ ಒಳ್ಳೆಯ ಕಾರ್ಯಕ್ರಮ ಇದಾಗಿದೆ. ಪ್ರತಿ ಮನೆ ಮನೆಯಲ್ಲಿ ಇಂತಹ ಭಾವೈಕ್ಯತೆಯ ಕವಿಗೋಷ್ಠಿಗಳೊಂದಿಗೆ ವಿಚಾರ ಸಂಕಿರಣಗಳು ನಡೆಯಬೇಕು ಎಂದರು. ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ ಡಾ. ಶರಣಪ್ಪ ಗಬ್ಬೂರ್ ಮಾತಾನಾಡಿ ಕನ್ನಡ ಸಾಹಿತ್ಯ ಕ್ಷೇತ್ರವು ಕೆಲವೇ ಮಂದಿಯ ಸ್ವತ್ತಾಗದೇ ಎಲ್ಲಾ ಜನಾಂಗದ ಸ್ವತ್ತಾಗಬೇಕು. ಜನರು ವರ್ಗ ಭೇದಗಳನ್ನು ಮರೆತು ಎಲ್ಲರೂ ಒಂದಾಗಿ ಕನ್ನಡಮಯ ವಾತಾವರಣ ಹುಟ್ಟು ಹಾಕುವಂತ ಕಾರ್ಯಕ್ಕೆ ಮುಂದಾಗಬೇಕೆಂದರು.
ಒಕ್ಕೂಟದ ರಾಜ್ಯಾಧ್ಯಕ್ಷರಾದ ಹೂಹಳ್ಳಿ ನಾಗರಾಜ ಅವರು ಮಾತಾನಾಡಿ ಸಾಮಾನ್ಯ ಜನರಲ್ಲಿಯೂ ಕೂಡ ಇಂತಹ ಸಾಹಿತ್ಯಾತ್ಮಕ ಚಟುವಟಿಕೆಗಳ ಬಗ್ಗೆ ಆಸಕ್ತಿ ಮೂಡಿಸುವ ಕೆಲಸಕ್ಕೆ ಮುಂದಾಗಬೇಕು. ಅಂದಾಗ ನಮ್ಮ ನಾಡಿನ ಕಲೆ ಸಾಹಿತ್ಯ ಉಳಿಯುತ್ತದೆ ಎಂದರು.
ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಸಂಘದ ಅಧ್ಯಕ್ಷ ಜಿ. ಶ್ರೀನಿವಾಸ ಮಾತಾನಾಡಿ ಸಂಸ್ಥೆಯ ಸಂಘಟಕರ ಮೇಲೆ ಜವಾಬ್ದಾರಿ ನಿಂತಿದೆ. ಪ್ರತಿನಿತ್ಯವು ಇಂತಹ ಕನ್ನಡಮಯ ವಾತಾವರಣವು ಎಲ್ಲಾ ಜನಾಂಗದವರ ಮೂಲಕ ನಡೆದಾಗ ಅದಕ್ಕೊಂದು ಅರ್ಥ ಬರುತ್ತದೆ. ಎಲ್ಲರೂ ಒಂದಾಗುವ ರೀತಿ ಭಾವೈಕ್ಯತೆಯ ಸಂಕೇತವಾಗಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿದ ಟಿಪ್ಪು ಸೆಕ್ಯೂಲರ್ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಆಸೀಫ್ ವುಲ್ಲಾ ಅವರು ಮಾತಾನಾಡಿ ನಾವೆಲ್ಲರೂ ಭಾರತೀಯರು. ಜಾತಿ ಮತಗಳನ್ನು ಮರೆತು ಈ ದೇಶದ ನೆಲ ಜಲ ಕನ್ನಡದ ಋಣವನ್ನು ತೀರಿಸಲು ಎಲ್ಲರೂ ಮುಂದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಮುಸ್ಲಿಂ ಬಾಂಧವರಾದ ನವಾಜ್, ವಾಸೀಂ, ನಾಜೀರ್, ನವಾಜ್ ಬಾಬು, ನಾಸೀರ್, ಹರ್ಷಿಯಾ, ವಸೀಂ, ಮುಬಾರಕ್, ವಜೀರ್ , ಮುಂತಾದವರು ಶಾಯರಿ, ಶೇರ್ ಗಳನ್ನು ವಾಚಿಸಿದರು.