ಇದು ಬಿ ರಿಪೋರ್ಟ್ ಸರ್ಕಾರ: ಬಿಜೆಪಿ ವಿರುದ್ಧ ಡಿಕೆಶಿ ಕಿಡಿ

ಹೊಸಪೇಟೆ, ಜ.17-ಲಂಚ ಪ್ರಕರಣದಲ್ಲಿ ಈಶ್ವರಪ್ಪ ಸೇರಿ ಯಾವುದೇ ಮಂತ್ರಿಗಳ, ಕನಕಗಿರಿ ಶಾಸಕನ ಹೆಸರು ಬಂದರೂ ಎಲ್ಲ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಲಾಗುತ್ತಿದೆ. ಇದೊಂದು ಬಿ ರಿಪೋರ್ಟ್ ಸರ್ಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಅಕ್ರಮ, ನೇಮಕಾತಿ, ಗುತ್ತಿಗೆ ಕಮಿಷನ್, ಅಂದಾಜು, ಸಂಸದರು ಹೇಳಿರುವಂತೆ ಕುಲಪತಿ ಹುದ್ದೆಗೆ ಕಾಸು ಸೇರಿದಂತೆ ಎಲ್ಲ ಪ್ರಕರಣದಲ್ಲೂ ಕೇಸ್ ದಾಖಲಿಸಿ ಮರು ತನಿಖೆ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.
ನಗರದ ಡಾ. ಪುನೀತ್‌ ರಾಜಕುಮಾರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಏರ್ಪಡಿಸಿದ್ದ ‘ಪ್ರಜಾ ಧ್ವನಿ’ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಗುತ್ತಿಗೆದಾರರ ಸಾವು, ನೇಮಕಾತಿ ಸೇರಿದಂತೆ ಇತರೆ ಅಕ್ರಮಗಳನ್ನು ರಾಜ್ಯಪಾಲರ ಅಧಿಕಾರ ದುರ್ಬಳಕೆ ಮಾಡಿಕೊಂಡು ರಾಜ್ಯ ಸರ್ಕಾರ ಎಲ್ಲಾ ಕೇಸ್‌ಗಳಿಗೂ ‘ಬಿ’ ರಿಪೋರ್ಟ್‌ ಹಾಕಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪಿಎಸ್ಐ, ಜೆಇಇ, ಸಹಾಯಕ ಪ್ರಾಧ್ಯಾಪಕ ಸೇರಿದಂತೆ ಎಲ್ಲ ಹುದ್ದೆಗೂ ಲಂಚ ಪಡೆಯುತ್ತಿದ್ದಾರೆ. ನಾವು ಅದನ್ನು ಬಯಲಿಗೆಳೆದೆವು. ಅಧಿಕಾರಿಗಳ ಸಮೇತ ದುಡ್ಡು ಕೊಟ್ಟವರು ಹಾಗೂ ಪಡೆದವರು ಈಗ ಜೈಲಿನಲ್ಲಿದ್ದಾರೆ. ಈ ದುಡ್ಡಿಗಾಗಿ ಬ್ರೋಕರ್ ಕೆಲಸ ಮಾಡಿದ ಶಾಸಕರು ಹಾಗೂ ಸಚಿವರುಗಳು ಮಾತ್ರ ಹೊರಗಡೆ ಇದ್ದಾರೆ. ಅವರು ಬ್ರೋಕರ್ ಕೆಲಸ ಮಾಡಿರುವ ಬಗ್ಗೆ ಟಿವಿ ಹಾಗೂ ಪತ್ರಿಕೆಗಗಳಲ್ಲಿ ಆಡಿಯೋ ಟೇಪ್ ವರದಿಯಾಗಿವೆ ಎಂದು ತಿಳಿಸಿದರು.
ಗೃಹಜ್ಯೋತಿ ಯೋಜನೆ ಮೂಲಕ ನಿಮ್ಮ ಮನೆಯಲ್ಲಿ ಬೆಳಕು, ಉದ್ಯೋಗ, ಉತ್ತಮ ಬದುಕು ನೀಡಲು ಪ್ರತಿ ಕುಟುಂಬಕ್ಕೆ 200 ಯುನಿಟ್ ಉಚಿತ ವಿದ್ಯುತ್ ನೀಡಲು ಬದ್ಧರಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್‌ ಪಕ್ಷ ಈ ದೇಶದಲ್ಲಿ ರಾಷ್ಟ್ರೀಕರಣ ಕೆಲಸ ಮಾಡಿದರೆ ಪ್ರತಿಯೊಂದರಲ್ಲೂ ಬಿಜೆಪಿ ಖಾಸಗೀಕರಣ ಮಾಡುತ್ತಿದೆ. ಆಪರೇಷನ್‌ ಕಮಲದ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಜನರಿಗಾಗಿ ಏನು ಮಾಡಿದೆ. ಅವರು ಕೊಟ್ಟ 600 ಭರವಸೆಗಳಲ್ಲಿ ಶೇ 10ರಷ್ಟು ಈಡೇರಿಸಿಲ್ಲ ಎಂದು ಟೀಕಿಸಿದರು.