ಇದು ನನ್ನ ಕೊನೆ ಚುನಾವಣೆ: ಡಾ.ನಾರಾಯಣಗೌಡ

ಕೆ.ಆರ್.ಪೇಟೆ.ಮೇ.03:- ರಾಜ್ಯ ವಿಧಾನಸಭೆಗೆ ಇದು ನನ್ನ ಕೊನೆಯ ಚುನಾವಣೆಯಾಗಿದೆ. ಕ್ಷೇತ್ರದಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿರುವ ಸಮರ್ಥ ಯುವಕರನ್ನು ಗುರುತಿಸಿ ಅವರಿಗೆ ನಾನು ತಾಲ್ಲೂಕಿನ ಅಧಿಕಾರವನ್ನು ಧಾರೆ ಎರೆಯುತ್ತೇನೆ ಎಂದು ಸಚಿವ ಡಾ.ನಾರಾಯಣಗೌಡ ಹೇಳಿದರು.
ಪಟ್ಟಣದ ರಾಮದಾಸ್ ಹೋಟೆಲ್ ನ ಸುಲೋಚನಮ್ಮ ಸಭಾಂಗಣದಲ್ಲಿ ನಡೆದ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮತಯಾಚನೆ ಮಾಡಿ ಮಾತನಾಡಿದರು..
ನಾನು ಬಿಜೆಪಿ ಪಕ್ಷವನ್ನು ನಂಬಿ ಬಂದಿದ್ದೇನೆ. ಕನಸು ಮನಸಿನಲ್ಲಿಯೂ ಬಿಜೆಪಿ ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ಮೋಸ ಮಾಡುವ ಉದ್ದೇಶವನ್ನು ಹೊಂದಿಲ್ಲ. ಕಾರ್ಯಕರ್ತರಿಗೆ ಏನಾದರೂ ನನ್ನಿಂದ ಅನ್ಯಾಯವಾಗಿದ್ದರೆ ಕ್ಷಮೆ ಕೋರುತ್ತೇನೆ. ಕಳೆದ ಉಪಚುನಾವಣೆಯಲ್ಲಿ ನನ್ನ ಗೆಲುವಿಗೆ ದುಡಿದು ಇತಿಹಾಸ ನಿರ್ಮಾಣ ಮಾಡಿದಂತೆ ಮುಂಬರುವ ಮೇ.10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ನನಗೆ ಆಶೀರ್ವಾದ ಮಾಡುವ ಮೂಲಕ ಕೆ.ಆರ್.ಪೇಟೆಯಲ್ಲಿ ಕಮಲ ಅರಳಿಸಿ ನಿಮ್ಮ ಸೇವೆ ಮಾಡುವ ಅವಕಾಶ ಕಲ್ಪಿಸಿಕೊಡಿ ಎಂದು ನಾರಾಯಣಗೌಡ ಕೈಮುಗಿದು ಮನವಿ ಮಾಡಿದರು.
ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷವನ್ನು ಬೆಂಬಲಿಸಿದ ಹಿನ್ನೆಲೆಯಲ್ಲಿ ತಾಲ್ಲೂಕಿನ ಸುಪುತ್ರ ರೈತನಾಯಕರಾದ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರು. ನನಗೆ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಕೆಲಸ ಮಾಡುವ ಅವಕಾಶ ದೊರಕಿತು. ನಾನು ನನ್ನ ಶಕ್ತಿಮೀರಿ ತಾಲ್ಲೂಕಿನ ಅಭಿವೃದ್ಧಿಗೆ 1800 ಕೋಟಿ ರೂಗಳಿಗೂ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿಸಿ ತಂದು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದ್ದೇನೆ. ತಾಲ್ಲೂಕಿನ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಜೊತೆಗೆ ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಸಂಘಟನೆ ಮಾಡಿದ್ದೇನೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಅಭ್ಯರ್ಥಿಗಳು ಕನಿಷ್ಠ ಮೂರರಿಂದ ನಾಲ್ಕು ಸ್ಥಾನಗಳನ್ನು ಪಡೆಯುವ ನಿಟ್ಟಿನಲ್ಲಿ ಪಕ್ಷದ ಸಂಘಟನೆಯಾಗಿದೆ. ಬಿಜೆಪಿ ಬಿ.ಫಾರಂ ಪಡೆಯಲು ಎಲ್ಲಾ ತಾಲೂಕುಗಳಲ್ಲಿ ಪೈಪೆÇೀಟಿ ಉಂಟಾಗಿದೆ. ಬಿಜೆಪಿ ಪಕ್ಷದ ಸಂಘಟನೆ ಮಾಡಿ ಜೆಡಿಎಸ್ ಕೋಟೆಯಲ್ಲಿ ಕಮಲ ಅರಳುವಂತೆ ಮಾಡಿದ ಕೀರ್ತಿ ನನಗಲ್ಲ ಬದಲಿಗೆ ಕೆ.ಆರ್.ಪೇಟೆಗೆ ಸಲ್ಲುತ್ತದೆ ಎಂದು ಅಭಿಮಾನದಿಂದ ಹೇಳಿದರು..
ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿಗಳಾದ ದೆಹಲಿ ರಾಜ್ಯದ ಬಿಜೆಪಿ ಪ್ರಧಾನಕಾರ್ಯದರ್ಶಿ ರಾಜೇಶ್ ಭಾಟಿಯಾ ಮಾತನಾಡಿ ನಾರಾಯಣಗೌಡ ಅವರು ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಮುಂದೆ ರಾಜ್ಯದಲ್ಲಿ ಬರುವ ಬಿಜೆಪಿ ಸರ್ಕಾರದಲ್ಲಿ ನಾರಾಯಣಗೌಡ ಮಂತ್ರಿಯಾಗಲಿದ್ದಾರೆ. ಬರಡು ಭೂಮಿಯಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಗಾಗಿ ದುಡಿದಿರುವ ಸಂಘಟನಾ ಚತುರ ನಾರಾಯಣಗೌಡರಿಗೆ ಉತ್ತಮ ಸ್ಥಾನಮಾನ ಸಿಗಲಿದೆ. ದೆಹಲಿ ಮೂಲದ ಹಲವಾರು ಸಮೀಕ್ಷಾ ತಂಡಗಳು ತಾಲೂಕಿನ ಮತದಾರರ ಮನದಾಳವನ್ನು ಸಮೀಕ್ಷೆ ನಡೆಸಿ ಅಧ್ಯಯನ ಮಾಡಿದ್ದು ನಾರಾಯಣಗೌಡರು ಶೇ.53ರಷ್ಟು ಮತಗಳನ್ನು ಪಡೆಯುವ ಮೂಲಕ 25 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿ ಮತ್ತೊಮ್ಮೆ ಕೆ.ಆರ್.ಪೇಟೆ ಶಾಸಕರಾಗಿ ದಾಖಲೆಯನ್ನು ನಿರ್ಮಿಸಲಿದ್ದಾರೆ ಎಂದರು.
ಜಿ.ಪಂ.ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಪುರಸಭಾ ಸದಸ್ಯರಾದ ಸಂತೋಷ್ ಕುಮಾರ್, ನಟರಾಜು,
ತಾಪಂ ಮಾಜಿ ಸದಸ್ಯ ರಾಜಾಹುಲಿದಿನೇಶ್, ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್, ತಾಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಲತಾಮುರಳಿ, ಸೇರಿದಂತೆ ಕಾರ್ಯಕರ್ತರು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.