ಇದು ಜನರ ಗೆಲುವು: ಅಲ್ಲಮಪ್ರಭು

ಕಲಬುರಗಿ,ಮೇ.14-ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಏಕಾಏಕಿ ಎದ್ದಿರುವ ಕಾಂಗ್ರೆಸ್ ಅಲೆಗೆ ಬಿಜೆಪಿ ಕೊಚ್ಚಿ ಹೋಗಿದೆ. ಜನರೇ ಕೈ ಹಿಡಿದಿದ್ದಾರೆ. ಪ್ರೀತಿಯಿಂದ ಬಂದು ಮತ ಹಾಕಿ ಗೆಲ್ಲಿಸಿದ್ದಾರೆ. ಶಾಸಕನಾಗಿ ಜನರ ಕೆಲಸ ಮಾಡಬೇಕೆಂಬ ಬಯಕೆ ಇತ್ತು, ಜನ ಮತ ಹಾಕಿ ಅದನ್ನು ಈಡೇರಿಸಿದ್ದಾರೆ. ಜನರ ಈ ಋಣವನ್ನು ಅವರು ಬಯಸಿದಂತೆ ಪ್ರಗತಿಪರ ಕೆಲಸಗಳನ್ನು ಮಾಡುವ ಮೂಲಕ ತೀರಿಸುವೆ ಎಂದು ಕಲಬುರಗಿ ದಕ್ಷಿಣ ಕಾಂಗ್ರೆಸ್ ಶಾಸಕ ಅಲ್ಲಂಪ್ರಭು ಪಾಟೀಲ್ ನೆಲೋಗಿ ಹೇಳಿದ್ದಾರೆ.
ತಮ್ಮ ಅಭೂತಪೂರ್ವ ಗೆಲವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕತರು, ಜನರಿಗೆ ಅರ್ಪಿಸಿರುವ ಅಲ್ಲಂಪ್ರಭು ಪಾಟೀಲ್ ಜನರೇ ಪ್ರೀತಿಯಿಂದ ಮುಂದೆ ಬಂದು ತಮ್ಮನ್ನು ಹೆಚ್ಚಿನ ಬಹುಮತದೊಂದಿಗೆ ಶಾಸಕರನ್ನಾಗಿ ಮಾಡಿದ್ದಾರೆ. ಅವರ ಪ್ರೀತಿಗೆ ತಾವು ಸದಾ ಋಣಿ ಎಂದಿದ್ದಾರೆ.
ಮುಂಬರುವ ದಿನಗಳಲ್ಲಿ ಪ್ರಾಮಾಣಿಕವಾಗಿ ದಕ್ಷಿಣ ಮತಕ್ಷೇತ್ರದ ಜನರಿಗಾಗಿ ಸೇವೆ ಸಲ್ಲಿಸುವೆ. ಯಾರನ್ನೂ ಟೀಕಿಸೋದಿಲ್ಲ, ಹಿಂದಿನ ಶಾಸರು ಅಭಿವೃದ್ಧಿ ಮಾಡುವಲ್ಲಿ ಎಡವಿದ್ದಾರೆ. ತಾವು ಅದನ್ನು ಸುಧಾರಿಸಿ ಹೆಚ್ಚಿನ ಅಭಿವೃದ್ಧಿ ಮಾಡೋದಾಗಿ ಹೇಳಿದ್ದಾರೆ. ಈ ಚುನಾವಣೆಯಲ್ಲಿ ಅಲ್ಲಂಪ್ರಭು ಪಾಟೀಲರು 21,048 ಮತಗಳ ಭಾರಿ ಅಂತರದೊಂದಿಗೆ ಕಲಬುರಗಿ ದಕ್ಷಿಣದಲ್ಲಿ 2 ದಶಕಗಳಿಂದ ಗೆಲ್ಲುತ್ತ ಹೊರಟಿದ್ದ, ಶಾಸಕರಾಗಿ ಅಧಿಕಾರದಲ್ಲಿದ್ದ ರೇವೂರ್ ಕುಟುಂಬವನ್ನು ಸೋಲಿಸಿದ್ದಾರೆ.
ಸಾಕಷ್ಟು ಬಾರಿ ಇಡೀ ಕ್ಷೇತ್ರ ಸುತ್ತಿರುವೆ. ಎಲ್ಲೆಲ್ಲಿ ಏನೆಲ್ಲಾ ಕೊರತೆಗಳಿವೆ ಎನ್ನುವುದು ಗೊತ್ತಿದೆ. ಕ್ಷೇತ್ರದಲ್ಲಿ ಮೂಲ ಸೌಕರ್ಯದ ಕೊರತೆ ತುಂಬಾ ಕಾಡುತ್ತಿರೋದು ಗಮನದಲ್ಲಿದೆ. ಒಳ ಚರಂಡಿ ಇಲ್ಲದೆ ಅನೇಕ ಬಡಾವಣೆಗಳಲ್ಲಿ ಸಮಸ್ಯೆ ಕಾಡುತ್ತಿದೆ. ಇಂತಹ ಕೊರತೆಗಳನ್ನು ನೀಗಿಸುವೆ. ಜನರು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅರಿವಿದೆ. ಅವನ್ನೆಲ್ಲ ಪರಿಹರಿಸುವ ದಿಶೆಯಲ್ಲಿ ಕೆಲಸ ಮಾಡುವೆ ಎಂದು ಅಲ್ಲಂಪ್ರಭು ಹೇಳಿದ್ದಾರೆ.
ಜನರೇ ಪ್ರೀತಿಯಿಂದ ನಾನು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಮತಗಳನ್ನು ಕೊಟ್ಟು ಗೆಲ್ಲಿಸಿದ್ದಾರೆ. ಹೀಗಾಗಿ ಜನರ ಋಣ ತೀರಿಸುವ ಜವಾಬ್ದಾರಿ ತಮ್ಮ ಮೇಲಿದೆ. ನಮ್ಮ ಪಕ್ಷದ ಬಹುಮತದ ಸರ್ಕಾರ ಬಂದಿರೋದರಿಂದ ಹಿಂದೆಂದಿಗಿಂತಲೂ ಹೆಚ್ಚಿನ ಕೆಲಸಗಳು ಈ ಬಾರಿ ಆಗಲಿವೆ. ಕಾಂಗ್ರೆಸ್ ಹೈಕಮಾಂಡ್ ಡಾ.ಖರ್ಗೆಜಿ ಮಾರ್ಗದರ್ಶನವಿರಲಿದೆ, ಕೆಪಿಸಿಸಿ ಅಧ್ಯಕ್ಷ, ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯನವರ ಉಸ್ತುವಾರಿಯಲ್ಲಿ ಕಲಬುರಗಿ ಸೇರಿದಂತೆ ರಾಜ್ಯದಲ್ಲಿ ಹೆಚ್ಚಿನ ಪ್ರಗತಿಪರ ಕೆಲಸಗಲಾಗಲಿವೆ ಎಂದು ಅಲ್ಲಂಪ್ರಭು ವಿಶ್ವಾಸ ವ್ಯಕ್ತಪಡಿಸಿದ್ದಾರೆ.