ಇತ್ತೀಚಿನ ದಿನಗಳಲ್ಲಿ ನೆಲ-ಜಲ ಪ್ರೇಮ ಕಣ್ಮರೆ

ಮೈಸೂರು:ಏ:16: ಕನ್ನಡದ ಏಳಿಗೆಯನ್ನೇ ಮೂಲೋದ್ದೇಶವಾಗಿಟ್ಟುಕೊಂಡು ನಾಲ್ವಡಿ ಕೃಷ್ಣರಾಜರ ಆಳ್ವಿಕೆಯಲ್ಲಿ ಪ್ರಾರಂಭವಾದ ಕನ್ನಡ ಸಾಹಿತ್ಯ ಪರಿಷತ್ ಸಾಕಷ್ಟು ಕನ್ನಡದ ಕೆಲಸಗಳನ್ನು ಮಾಡಿಕೊಂಡು ಬಂದಿದ್ದರೂ ಇತ್ತೀಚಿನ ದಿನಗಳಲ್ಲಿ ಅದು ಕನ್ನಡದ ನೆಲ ಜಲವನ್ನು ಕಾಯುವ ಕೆಲಸವನ್ನು ಮಾಡುವ ವಿಚಾರದಲ್ಲಿ ಅಷ್ಟೇನೂ ಆಸಕ್ತಿ ತೋರದೆ ಕಾವೇರಿ ನದಿ ನೀರಿನ ವಿಚಾರದಲ್ಲೇ ಆಗಲಿ, ಗಡಿ ವಿಚಾರದಲ್ಲೇ ಆಗಲಿ ತಾನು ತನ್ನನ್ನು ತೊಡಗಿಸಿಕೊಳ್ಳದೆ ಕನ್ನಡಿಗರಿಗೆ ಅನ್ಯಾಯ ಮಾಡಿದೆ ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ನಾಮಪತ್ರ ಹಿಂಪಡೆದ ಕೊ.ಸು.ನರಸಿಂಹಮೂರ್ತಿ ಆರೋಪಿಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಸಾಪದ ಅಧ್ಯಕ್ಷರಾಗಿ ಬರುವವರೂ ಸಹ ತಮ್ಮ ಹಣ ಬಲದಿಂದ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವತ್ತ ಗಮನಹರಿಸಿದ್ದು ಕಸಾಪ ಅಧ್ಯಕ್ಷಗಿರಿಯೆಂದರೆ ಅದೂ ಸಹ ಕ್ಯಾಬಿನೇಟ್ ದರ್ಜೆಯ ಸಚಿವ ಸ್ಥಾನವೆನ್ನುವಂತೆ ಆಗಿದ್ದು ಸರ್ಕಾರದಿಂದ ಬರುವ ಅನುದಾನವನ್ನು ಖರ್ಚು ಮಾಡುವ ಲೋಲಾಪ್ತಿ ಜನರ ಅಡ್ಡೆಯಾಗಿದೆ. ಜಿಲ್ಲಾ ಅಧ್ಯಕ್ಷರ ಸ್ಥಾನವೂ ಸಹ ಹಲವು ಕುಂದುಕೊರತೆಯ ಆಗರವಾಗಿದ್ದು ಸರ್ಕಾರದಿಂದ ಪಡೆದ ಅನುದಾನವು ಸದುಪಯೋಗವಾಗುತ್ತಿಲ್ಲವೆಂಬ ಕೂಗು ಸದಸ್ಯರಲ್ಲೆದ್ದಿದೆ. ಇದಕ್ಕೊಂದು ತಾಜಾ ಉದಾಹರಣೆ 2016ರಲ್ಲಾದ ಮೈಸೂರಿನ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚಗಳನ್ನು ಸಾರ್ವಜನಿಕರ ಮುಂದಿಡುತ್ತೇವೆಂದು ಅಧಿಕಾರದಲ್ಲಿರುವವರು ಹೇಳಿದ್ದರೂ ಅದನ್ನವರು ಇಲ್ಲಿಯವರೆಗೆ ಮಾಡಿಲ್ಲ ಎಂದರು.
ಸಾಹಿತ್ಯದ ಗಂಧ ಗಾಳಿಯನ್ನರಿಯದ ಮಂದಿ ತಮ್ಮ ಹಣ ಬಲದಿಂದ ಜಿಲ್ಲಾಧ್ಯಕ್ಷರಾಗಿ ಚುನಾಯಿತರಾಗುತ್ತಿದ್ದಾರೆ. ಜಾತಿಯ ಬಲವೊಂದೆ ಜಿಲ್ಲಾಧ್ಯಕ್ಷರ ಆಯ್ಕೆಯ ಮಾನದಂಡವಾಗಿರುತ್ತದೆ. ಇದನ್ನು ತಪ್ಪಿಸುವ ಸಲುವಾಗಿಯೇ ಮೈಸೂರು ಕಸಾಪ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ನಾವುಗಳು ನಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡು ಸಾಹಿತ್ಯ ವಲಯದಲ್ಲಿ ತಮ್ಮನ್ನು ಗುರುತಿಸಿಕೊಂಡ ಸಂಭಾವಿತ ಸಾಹಿತಿ ಬನ್ನೂರು ಕೆ. ರಾಜು ಅವರಿಗೆ ಬೆಂಬಲ ನೀಡಿ ಅವರನ್ನೇ ಚುನಾಯಿಸಿ ಹಳಿತಪ್ಪಿ ಹೋದ ಕಸಾಪ ವನ್ನು ಮತ್ತೆ ಹಳಿಯ ಮೇಲೆ ನಿಲ್ಲಿಸಿ ಕಸಾಪ ಇನ್ನು ಮುಂದಾದರೂ ಸರಿದಾರಿಯಲ್ಲಿ ನಡೆಯುವಂತೆ ಮಾಡಬೇಕೆಂದು ಮತದಾರರಲ್ಲಿ ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್.ಎಸ್.ಮಂಜುನಾಥ್ ಶೆಟ್ಟಿ, ಗೋಪಾಲ್ ಉಪಸ್ಥಿತರಿದ್ದರು.