ಇತಿಹಾಸ ಸೃಷ್ಟಿಸುವ ಆದರ್ಶ ಶಿಕ್ಷಕರು ಹೆಚ್ಚಾಗಲಿ

ಕಲಬುರಗಿ,ಸೆ.05: ಶಿಕ್ಷಕರು ವಿದ್ಯಾರ್ಥಿಗಳಿಗೆ ಶ್ರೇಷ್ಠ ಜ್ಞಾನ, ಬುದ್ದಿ, ಸಂಸ್ಕಾರ, ಮಾನವೀಯ ಮೌಲ್ಯಗಳು ಮತ್ತು ಸೂಕ್ತ ಮಾರ್ಗದರ್ಶನ ಮಾಡಬೇಕು. ಗುಣಮಟ್ಟದ ಬೋಧನೆಯ ಜೊತೆ ವಿದ್ಯಾರ್ಥಿಗಳಿಗೆ ಬದುಕುವ ಕಲೆಯನ್ನು ಕಲಿಸಿಕೊಟ್ಟು, ಅವರ ಜೀವನ ರೂಪಿಸುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸುವ ಆದರ್ಶ ಶಿಕ್ಷಕರ ಪ್ರಮಾಣ ಪ್ರಸ್ತುತ ಸಂದರ್ಭದಲ್ಲಿ ಹೆಚ್ಚಳವಾಗಬೇಕಾಗಿದೆ ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ‘ಶಿಕ್ಷಕರ ದಿನಾಚರಣೆ’ಯಲ್ಲಿ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ ಪುರಸ್ಕøತ ಶಿಕ್ಷಕರಿಗೆ ಗೌರವ ಸತ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಿಕ್ಷಕರು ಎಂದಿಗೂ ಕೂಡಾ ತಮ್ಮ ಬೋಧನೆಯಿಂದ ದೂರಸರಿಯಬಾರದು. ನಿರಂತರ ಅಧ್ಯಯನಶೀಲರಾಗಬೇಕು. ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ತಿಳಿದು ಕಾಳಜಿ ಮಾಡಬೇಕು. ಮೌಲ್ಯಗಳು, ವೈಚಾರರಿಕತೆ ಮೈಗೂಡಿಸಿಕೊಳ್ಳಬೇಕು. ಸಮಾಜ ಸೇವಕರಾಗಬೇಕು. ತುಂಬಾ ಚೆನ್ನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ತೋರಿಸುವ ನಾಟಕ ಮಾಡುವ ಶಿಕ್ಷಕರು ವ್ಯರ್ಥ. ಸಮಾಜದಲ್ಲಿ ಗುರುವಿನ ಪಾತ್ರ ಮಹತ್ತರವಾದುದ್ದನ್ನು ಮರೆಯದೇ ಕಾರ್ಯನಿರ್ವಹಸಿದ್ದೇ ಆದರೆ, ಅಂತಹ ಶಿಕ್ಷಕರು ನಿಜವಾಗಿಯೂ ಆದರ್ಶ ಶಿಕ್ಷಕರಾಗುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ಸಂತೋಷ ಹೂಗಾರ ಮಾತನಾಡಿ, ದೇಶಕ್ಕೆ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಕೊಡುಗೆ ಅಪಾರವಾಗಿದೆ. ಸಮಾಜದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ತನಗಿಂತ ದೊಡ್ಡ ಸ್ಥಾನದಲ್ಲಿ ಬೆಳೆದ ವ್ಯಕ್ತಿಯನ್ನು ನೋಡಿ ಆನಂದ ಪಡುವ ವ್ಯಕ್ತಿ ತಂದೆ-ತಾಯಿ ಮತ್ತು ಶಿಕ್ಷಕರಾಗಿದ್ದು, ಅವರನ್ನು ಎಂದಿಗೂ ಕೂಡಾ ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ಶಿಕ್ಷಕರಾದ ಸಂತೋಷ ಹೂಗಾರ, ಶರಣಬಸಪ್ಪ ಬಿರಾದಾರ, ಅಪ್ಪಾಸಾಬ್ ತೀರ್ಥೆ, ಶೈಲಜಾ ಜೋಶಿ ಅವರಿಗೆ ಸತ್ಕರಿಸಿ, ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಎಚ್.ಬಿ.ಪಾಟೀಲ, ಅಸ್ಲಾಂ ಶೇಖ್, ನರಸಪ್ಪ ಬಿರಾದಾರ ದೇಗಾಂವ, ಶಿವಯೋಗಪ್ಪ ಬಿರಾದಾರ, ನೀಲಕಂಠಯ್ಯ ಹಿರೇಮಠ, ರವಿ ಜೋಶಿ, ಕಲ್ಲಪ್ಪ ಮಂಠಾಳೆ, ಪ್ರಿಯಾಂಕಾ ದೋಟಿಕೊಳ್ಳ, ಸಾನಿಯಾ ಶೇಖ್, ಐಶ್ವರ್ಯ ಬಿರಾದಾರ, ಶೃತಿ ಶಿರೂರ್, ಪಾಯಲ್ ಹಿಬಾರೆ ಹಾಗೂ ವಿದ್ಯಾರ್ಥಿಗಳಿದ್ದರು.