ಇತಿಹಾಸ, ಸಂಸ್ಕೃತಿಯ ಅರಿವಿಗೆ ಪ್ರವಾಸ ಸಹಕಾರಿ

ಕೋಲಾರ,ಜ,೨೩-ಸರ್ಕಾರಿ ಶಾಲೆಗಳ ಪರಿಶಿಷ್ಟ ಜಾತಿ ವರ್ಗಗಳ ಹಾಗೂ ಹಿಂದುಳಿದ, ಇತರೆ ವರ್ಗಗಳ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ಸೋಮವಾರ ಬೆಳಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಿಕ್ಷಣ ಸಂಯೋಜಕ ವೆಂಕಟಾಚಲಪತಿ ಹಾಗೂ ರಾಘವೇಂದ್ರ ಚಾಲನೆ ನೀಡಿದರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ತಾಲ್ಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ್ದ ೧೦೭ ವಿದ್ಯಾರ್ಥಿಗಳನ್ನು ಹೊತ್ತ ಸಾರಿಗೆ ಸಂಸ್ಥೆ ಬಸ್ಸುಗಳಿಗೆ ಪೂಜೆ ಸಲ್ಲಿಸುವ ಮೂಲಕ ಕರ್ನಾಟಕ ದರ್ಶನ ಪ್ರವಾಸಕ್ಕೆ ಶುಭ ಕೋರಿದರು.
ಜ್ಞಾನಾಭಿವೃದ್ದಿಗೆ ಪ್ರವಾಸ ಸಹಕಾರಿ:
ಇಸಿಒ ವೆಂಕಟಾಚಲಪತಿಮಾತನಾಡಿ, ಮಕ್ಕಳಲ್ಲಿ ನಮ್ಮ ಇತಿಹಾಸ, ಸಂಸ್ಕೃತಿಯ ಜತೆಗೆ ಪ್ರಾಚ್ಯಪ್ರಜ್ಞೆ ಹೆಚ್ಚಲು ಹಾಗೂ ಸಾಮಾನ್ಯ ಜ್ಞಾನ ವೃದ್ದಿಗೆ ಈ ಪ್ರವಾಸ ಸಹಕಾರಿಯಾಗಿದ್ದು, ನಮ್ಮ ರಾಜ್ಯದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಇಸಿಒ ರಾಘವೇಂದ್ರ ಮಾತನಾಡಿ, ತಾವೂ ಮಕ್ಕಳೊಂದಿಗೆ ಪ್ರವಾಸ ತೆರಳುತ್ತಿದ್ದು, ಮಕ್ಕಳಿಗೆ ಶೈಕ್ಷಣಿಕವಾಗಿ ಮಾಹಿತಿ ಪಡೆಯಲು ಅಗತ್ಯವಿರುವ ಐತಿಹಾಸಿಕ ಕ್ಷೇತ್ರಗಳ ದರ್ಶನ ಮಾಡಿಸಲಾಗುತ್ತಿದೆ, ಕಲೆ,ಸಾಂಸ್ಕೃತಿಕ ಪರಿಚಯ ಈ ಪ್ರವಾಸದ ಮೂಲಕ ಮಾಡಿಸಲಾಗುತ್ತಿದೆ ಎಂದರು.
ಪ್ರವಾಸದಲ್ಲಿ ಬೇಲೂರು, ಹಳೆಬೀಡು, ಹಂಪೆ, ಚಿತ್ರದುರ್ಗ, ಶಿರಸಿ, ಬನವಾಸಿ, ಇಕ್ಕೇರಿ, ಶ್ರವಣಬೆಳಗೊಳ ಮತ್ತಿತರ ಕ್ಷೇತ್ರಗಳ ದರ್ಶನ ಮಾಡಿಸಲಿದ್ದು, ನಾಲ್ಕು ದಿನಗಳ ಪ್ರವಾಸ ಇದಾಗಿದೆ, ಮಾಲೂರು ತಾಲ್ಲೂಕಿನ ೧೦೬ ಹಾಗೂ ಕೋಲಾರ ತಾಲ್ಲೂಕಿನ ೧೦೭ ಮಕ್ಕಳು ೪ ಬಸ್ಸುಗಳಲ್ಲಿ ತೆರಳುತ್ತಿದಾರೆ ಎಂದರು.ಈ ಪ್ರವಾಸದಲ್ಲಿ ಮಕ್ಕಳ ಪಠ್ಯಕ್ಕೆ ಅನುಕೂಲವಾಗುವಂತೆ ಪ್ರೇಕ್ಷಣೀಯ ಸ್ಥಳಗಳ ಆಯ್ಕೆ ಮಾಡಿದ್ದು, ಮಕ್ಕಳ ಸುರಕ್ಷತೆಗೆ ಹೆಚ್ಚಿನ ನಿಗಾ ವಹಿಸುವುದಾಗಿ ತಿಳಿಸಿದರು. ಮಕ್ಕಳೊಂದಿಗೆ ಕೆಎಸ್‌ಟಿಡಿಸಿಯ ಪ್ರಕಾಶ್, ಹರೀಶ್, ಬಿಇಒ ಕಚೇರಿಯ ಸುದರ್ಶನ್, ಶಿಕ್ಷಕರಾದ ಸುಬ್ರಮಣಿ, ಭಾಗ್ಯಲಕ್ಷ್ಮಿ, ಜಯಂತಿ,ಮ ಪ್ರಶಾಂತ್ ಹೋಗುತ್ತಿದ್ದಾರೆ.
ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಸೂಲೂರು ಚಂದ್ರಪ್ಪ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಮುರಳಿಮೋಹನ್, ಮುಖ್ಯಶಿಕ್ಷಕರಾದ ನಾಗರಾಜ್, ಪದ್ಮಾವತಿ, ಶಿಕ್ಷಕರಾದ ಬಾಲಕಿಯರ ಪಿಯು ಕಾಲೇಜಿನ ವಿಜಯಕುಮಾರ್ ಇದ್ದರು.