ಇತಿಹಾಸ ಪ್ರಸಿದ್ಧ ಅಜ್ಜನ ಜಾತ್ರೆ ೩ ದಿನಕ್ಕೆ ಸೀಮಿತ

ಕೊಪ್ಪಳ,ಜ.೯- ಜಿಲ್ಲೆಯ ಇತಿಹಾಸ ಪ್ರಸಿದ್ಧ ಗವಿಮಠದ ಅಜ್ಜನಜಾತ್ರೆ ಕೊರೊನಾ ನಡುವೆ ನಡೆಯುವುದು ಖಚಿತವಾಗಿದ್ದು, ಈ ಜಾತ್ರೆ ಮಹೋತ್ಸವವನ್ನು ಮೂರು ದಿನಕ್ಕೆ ಸೀಮಿತಗೊಳಿಸುವ ಸಾಧ್ಯತೆ ಹೆಚ್ಚಾಗಿದೆ.
ಈ ತಿಂಗಳ ೧೧ ರಂದು ಜಿಲ್ಲಾಡಳಿತ ಮತ್ತು ಮಠದ ಭಕ್ತರು ರಥೋತ್ಸವ ಸಂಘಟಕರ ಸಭೆ ನಡೆಯಲಿದ್ದು, ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಠದ ಮೂಲಗಳು ತಿಳಿಸಿವೆ.
ಗವಿ ಮಠದ ಅಜ್ಜನ ಜಾತ್ರಾ ಮಹೋತ್ಸವ ದಕ್ಷಿಣ ಭಾರತದ ಕುಂಭಮೇಳ, ಉತ್ತರದ ಸಿದ್ಧಗಂಗೆಯೆಂದೇ ಪ್ರಸಿದ್ಧಿಯಾಗಿದೆ. ಈ ಜಾತ್ರೆ ನಡೆಯುವುದು ಖಚಿತವಾಗಿದ್ದರೂ ಈ ಬಗ್ಗೆ ಇದುವರೆಗೆ ಅಧಿಕೃತ ಪ್ರಕಟಣೆ ಹೊರ ಬಿದ್ದಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ಪಾಟೀಲ್ ಮತ್ತು ಸಂಸದ ಕರಡಿ ಸಂಗಣ್ಣ, ಶಾಸಕರಾದ ಅಮರೇಗೌಡ ಬೈಯಾಪುರ, ರಾಘವೇಂದ್ರ ಹಿಟ್ನಾಳ್ ಸಭೆ ಸೇರಿ ಜಾತ್ರಾ ಮಹೋತ್ಸವ ಕುರಿತು ಚರ್ಚೆ ನಡೆಸಿದ್ದಾರೆ.
ಕೋವಿಡ್-೧೯ ಹಿನ್ನೆಲೆಯಲ್ಲಿ ಈ ಭಾರಿ ಅಜ್ಜನ ಜಾತ್ರೆ ನಡೆಯುತ್ತದೋ ಇಲ್ಲವೋ ಎಂಬ ಬಗ್ಗೆ ಸಾಕಷ್ಟು ಗೊಂದಲವುಂಟಾಯಿತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರವಿರೋಧ ಚರ್ಚೆ ಅಭಿಯಾನಗಳು ಆರಂಭವಾಗಿದ್ದವು. ಅಲ್ಲದೆ ೨ನೇ ಹಂತದ ರೂಪಾಂತರಿ ಅಲೆ ಭೀತಿಯ ಕರಿನೆರಳು ಜಾತ್ರಾ ಮಹೋತ್ಸವದ ಮೇಲೆ ಆವರಿಸಿತ್ತು.ಆದರೆ ಈಗ ಜಾತ್ರೆ ನಡೆಯುವುದು ಖಚಿತವಾಗಿದೆ.
ಈ ಬಾರಿ ಅದ್ಧೂರಿತನ ಇರುವುದಿಲ್ಲ. ೧೫ ದಿನಗಳ ಕಾಲ ನಡೆಯುತ್ತಿದ್ದ ಈ ಜಾತ್ರೆ ಕೇವಲ ಮೂರು ದಿನಗಳಿಗೆ ಸೀಮಿತಗೊಳ್ಳಲಿದೆ ಎಂದು ಹೇಳಲಾಗಿದೆ.
ಭಕ್ತರಿಗೆ ಆಹಾರ ಪೊಟ್ಟಣಗಳನ್ನು ನೀಡುವ ವಿಚಾರ ಸಭೆಯಲ್ಲಿ ಪ್ರಸ್ತಾಪವಾದರೂ ಅದಕ್ಕೆ ಶ್ರೀಗಳು ಸಮ್ಮತಿಸಿಲ್ಲ. ಆಹಾರ ಪೊಟ್ಟಣಗಳನ್ನು ವಿತರಿಸಿದರೆ ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ದಾಸೋಹಕ್ಕೆ ಅನುಮತಿ ನೀಡಿದ್ದಾರೆ.