ಇತಿಹಾಸ ಪ್ರಸಿದ್ದ ಪುತ್ತೂರು ಜಾತ್ರೆ ವಿಜೃಂಭಣೆಯ ‘ಬ್ರಹ್ಮರಥೋತ್ಸವ’ ಆಕರ್ಷಕ ‘ಪುತ್ತೂರ ಬೆಡಿ’

ಪುತ್ತೂರು, ಎ.೧೯-  ಇತಿಹಾಸ ಪ್ರಸಿದ್ದ ಪುತ್ತೂರು ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವವು ಶನಿವಾರ ರಾತ್ರಿ ಭಕ್ತಿ ಸಂಭ್ರಮದೊಂದಿಗೆ ವೈಭವಯುತವಾಗಿ ನಡೆಯಿತು. ಸರ್ಕಾರದ ಕೊರೊನಾ ನಿಯಮಕ್ಕೆ ತಕ್ಕಂತೆ ಸೀಮಿತ ಭಕ್ತರಿಂದ ದೇವರ ರಥ ಎಳೆಯಲಾಯಿತು.

ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆದ ಬ್ರಹ್ಮರಥೋತ್ಸವದಲ್ಲಿ ಆರಂಭದಲ್ಲಿ ಬ್ರಹ್ಮರಥ ಸೇವೆ ನೀಡಿದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಮತ್ತು ಸದಸ್ಯರ ಉಪಸ್ಥಿತಿಯಲ್ಲಿ ಉತ್ಸವಾದಿಗಳು ನಡೆಯಿತು. .ಬ್ರಹ್ಮರಥೋತ್ಸವದ ಮೊದಲು ನಡೆದ ಆಕರ್ಷಕ ಸುಡುಮದ್ದು ಪ್ರದರ್ಶನದ ’ಪುತ್ತೂರು ಬೆಡಿ’ ಸಂಪ್ರದಾಯಕ್ಕೆ ತಕ್ಕಂತೆ ಪ್ರದರ್ಶನ ನಡೆಯಿತು. ಈ ಬಾರಿ ರೂ. ೧.೫೦ ಲಕ್ಷ ವೆಚ್ಚದ ಸುಡುಮದ್ದು ಪ್ರದರ್ಶನ ನಡೆಯಿತು.

ಏ.೧೭ರಂದು ಬೆಳಿಗ್ಗೆ ದೇವಸ್ಥಾನದಲ್ಲಿ ಉತ್ಸವ, ಕಟ್ಟೆಪೂಜೆ, ಮಧ್ಯಾಹ್ನ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ಸಂಜೆ ದೇವರ ಮತ್ತು ಉಳ್ಳಾಲ್ತಿ ಅಮ್ಮನವರ ಉತ್ಸವ ನಡೆಯಿತು. ಬಳಿಕ ಬ್ರಹ್ಮರಥದ ಬಳಿ ಕಾಜುಕುಜುಂಬ ದೈವದ ನುಡಿಗಟ್ಟು ನಡೆದು ದೇವರು ರಥಾರೂಢರಾದರು. ಬಳಿಕ ಪುತ್ತೂರು ಬೆಡಿ ಆರಂಭವಾಯಿತು. ಸುಮಾರು ೧ ಗಂಟೆ ಕಾಲ ಸುಡುಮದ್ದು ಪ್ರದರ್ಶನ ನಡೆದು ರಾತ್ರಿ ಗಂಟೆ ೯.೪೫ಕ್ಕೆ ವೇಳೆ ಬ್ರಹ್ಮರಥದ ಮುಂದೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಸದಸ್ಯರಾದ ಡಾ. ಸುಧಾ ಎಸ್ ರಾವ್, ವೀಣಾ ಬಿ.ಕೆ. ರಾಮಚಂದ್ರ ಕಾಮತ್, ರಾಮ್‌ದಾಸ್ ಗೌಡ, ಶೇಖರ್ ನಾರಾವಿ, ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು, ದೇವಳದ ಮಾಜಿ ಆಡಳಿತ ಮೊಕ್ತೇಸರ ಎನ್.ಕೆ. ಜಗನ್ನಿವಾಸ ರಾವ್ ಅವರು ತೆಂಗಿನ ಕಾಯಿ ಒಡೆದ ತರುವಾಯ ಬ್ರಹ್ಮರಥೋತ್ಸವ ನಡೆಯಿತು.  ಬ್ರಹ್ಮರಥದಿಂದ ಇಳಿದ ದೇವರು ಬಂಗಾರ್ ಕಾಯರ್‌ಕಟ್ಟೆ ಸವಾರಿಯ ಬಳಿಕ ಅಂಕೆತ್ತಿಮಾರ್ ಕಟ್ಟೆಯಲ್ಲಿ ಕಟ್ಟೆ ಪೂಜೆ ಸ್ವೀಕರಿಸಿ ದಂಡ ನಾಯಕ ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆಯ ಬಳಿಕ ದೇವಳದ ಒಳಗೆ ಪ್ರವೇಶ, ಶಯನ ನಡೆಯಿತು.

ಬಿಗಿ ಪೊಲೀಸ್ ಬಂದೋಬಸ್ತ್ ಸಿಸಿ ಕ್ಯಾಮರಾ ಅಳವಡಿಕೆ:

 ಜಾತ್ರೋತ್ಸವದ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಬಿಗು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.ಜಾತ್ರಾ ಗದ್ದೆಂiiಲ್ಲಿ ಪೊಲೀಸ್ ಮಾಹಿತಿ ಕೇಂದ್ರದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ದೇವಳದ ವತಿಯಿಂದಲೇ ಪ್ರಾರಂಭಿಸಲಾಗಿದ್ದ ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಅವರ ನೇತೃತ್ವದಲ್ಲಿ ಮಾಹಿತಿ ಕೇಂದ್ರದ ಮೂಲಕ ಭಕ್ತಾದಿಗಳಿಗೆ ವಿವಿಧ ಮಾಹಿತಿಯನ್ನು ಕ್ಷಣಕ್ಷಣಕ್ಕೂ ನೀಡಲಾಗುತ್ತಿತ್ತು. ಗದ್ದೆಯ ವಿವಿಧ ಕಡೆಗಳಲ್ಲಿ ಹೆಚ್ಚುವರಿ ಸಿ.ಸಿ.ಕ್ಯಾಮರಾ ಅಳವಡಿಸಲಾಗಿತ್ತು.ಮಾತ್ರವಲ್ಲದೆ ದೇವಳದ ಸುತ್ತಮುತ್ತ ಹಾಗೂ ವಾಹನ ಪಾರ್ಕಿಂಗ್ ಸ್ಥಳ ಸೇರಿದಂತೆ ಇತರ ಕಡೆ ಹಲವು  ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಜಾತ್ರಾ ಗದ್ದೆಯಲ್ಲಿಯೇ ಪೊಲೀಸ್ ಹೊರ ಠಾಣೆಯನ್ನು ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿತ್ತು.ಜತೆಗೆ ಅಗ್ನಿ ಶಾಮಕ, ಆರೋಗ್ಯ ಇಲಾಖೆ ಮತ್ತು ನಗರಸಭೆಯ ತಾತ್ಕಾಲಿಕ ಮಾಹಿತಿ ಕೇಂದ್ರವನ್ನೂ ತೆರೆಯಲಾಗಿತ್ತು.

ದೇವಳದ ನಿತ್ಯ ಕರಸೇವಕರು ಸೇರಿದಂತೆ ಸ್ವಯಂ ಪ್ರೇರಿತರಾಗಿ ನೂರಕ್ಕೂ ಅಧಿಕ ಸ್ವಯಂ ಸೇವಕರು ವಾಹನ ಸಂಚಾರ ನಿಯಂತ್ರಣ, ಭಕ್ತಾದಿಗಳಿಗೆ ಮಾರ್ಗದರ್ಶನ, ಭಕ್ತರ ಸಂಖ್ಯೆಯನ್ನು ಉತ್ಸವದ ಸಂದರ್ಭ ನಿಯಂತ್ರಿಸಲು ಮತ್ತು ಅನ್ನಪ್ರಸಾದ ಬಡಿಸುವ ವ್ಯವಸ್ಥೆಯಲ್ಲೂ ಸಹಕರಿಸಿದರು.