ಇತಿಹಾಸ ಪುಟ ಸೇರಿದ ಡೀಸೆಲ್ ಡಬ್ಬಲ್ ಡೆಕ್ಕರ್

ಮುಂಬೈ,ಸೆ.೧೬-ಮುಂಬೈ ಸಾರಿಗೆಯ ಮಾತು ಬಂದಾಗಲೆಲ್ಲ ಎರಡು ಚಿತ್ರಗಳು ನೆನಪಿಗೆ ಬರುತ್ತವೆ.ಮೊದಲನೆಯದು ಮುಂಬೈ ಲೋಕಲ್ ಮತ್ತು ಎರಡನೆಯದಾಗಿ ಮುಂಬೈನಲ್ಲಿ ಓಡುತ್ತಿರುವ ಕೆಂಪು ಬಣ್ಣದ ಡಬಲ್ ಡೆಕ್ಕರ್ ಬಸ್ಸುಗಳು.
ಮುಂಬೈನಲ್ಲಿ ಪ್ರತಿದಿನ ಸಾವಿರಾರು ಜನರು ಡಬಲ್ ಡೆಕ್ಕರ್ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಆದರೆ ನಿನ್ನೆ ಕೆಂಪು ಬಣ್ಣದ ಡಬಲ್ ಡೆಕ್ಕರ್ ಬಸ್‌ಗಳು ತಮ್ಮ ಕೊನೆಯ ಪ್ರಯಾಣ ಮಾಡಿದವು .
ಹಳೆಯ ಡಬಲ್ ಡೆಕ್ಕರ್ ಬಸ್ ಮುಂಬೈನ ರಸ್ತೆಗಳಲ್ಲಿ ಕೊನೆಯ ಬಾರಿಗೆ ಓಡಿತು. ಈಗ ಈ ಹಳೆಯ ಡಬಲ್ ಡೆಕ್ಕರ್ ಬಸ್‌ಗಳು ರಸ್ತೆಗಳಲ್ಲಿ ಕಾಣದೇ ಇತಿಹಾಸದ ಪುಟ ಸೇರಲಿವೆ.
ಬ್ರಿಟಿಷರ ಕಾಲದಿಂದ ಓಡುತ್ತಿದ್ದ ಈ ಬಸ್‌ಗಳು ಇನ್ನು ಮುಂದೆ ಓಡುವುದಿಲ್ಲ. ೧೯೩೭ ರಲ್ಲಿ, ಬ್ರಿಟಿಷರು ಮುಂಬೈನಲ್ಲಿ ಮೊದಲ ಡಬಲ್ ಡೆಕ್ಕರ್ ಬಸ್ ಓಡಿಸಿದರು. ಅಂದಿನಿಂದ ಇದು ಸಾರಿಗೆಯ ಪ್ರಮುಖ ಸಾಧನವಾಯಿತು.
ಪ್ರಸ್ತುತ ಮುಂಬೈನಲ್ಲಿ ಕೇವಲ ಏಳು ಡಬಲ್ ಡೆಕ್ಕರ್ ಬಸ್‌ಗಳಿವೆ, ಅವುಗಳಲ್ಲಿ ಮೂರು ತೆರೆದ ಡೆಕ್ ಬಸ್‌ಗಳಾಗಿವೆ ಎಂದು ಬೆಸ್ಟ್ ವಕ್ತಾರರು ಸುದ್ದಿ ಸಂಸ್ಥೆಗೆ ತಿಳಿಸಿದರು. ಸೆಪ್ಟೆಂಬರ್ ೧೫ ರಿಂದ ಡಬಲ್ ಡೆಕ್ಕರ್ ಬಸ್‌ಗಳು ಮತ್ತು ಅಕ್ಟೋಬರ್ ೫ ರಿಂದ ಓಪನ್ ಡೆಕ್ ಬಸ್‌ಗಳನ್ನು ರಸ್ತೆಯಿಂದ ತೆಗೆದುಹಾಕಲಾಗುವುದು ಎಂದು ಅವರು ಹೇಳಿದರು.
ಈ ಬಸ್‌ಗಳು ಡೀಸೆಲ್‌ನಲ್ಲಿ ಚಲಿಸುತ್ತವೆ. ಮತ್ತು ಡೀಸೆಲ್ ವಾಹನಗಳ ಜೀವಿತಾವಧಿ ೧೫ ವರ್ಷಗಳು. ಈ ಏಳು ಬಸ್‌ಗಳು ೧೫ ವರ್ಷ ಪೂರೈಸುತ್ತಿದ್ದು, ಈಗ ಅವುಗಳನ್ನು ತೆಗೆದುಹಾಕಲಾಗುತ್ತಿದೆ.
ಈ ಡೀಸೆಲ್ ಚಾಲಿತ ಡಬಲ್ ಡೆಕ್ಕರ್ ಬಸ್‌ಗಳನ್ನು ಸೆಪ್ಟೆಂಬರ್ ೧೫ ರಿಂದ ಮುಂಬೈನಲ್ಲಿ ಸಂಪೂರ್ಣವಾಗಿ ನಿಲ್ಲಿಸಲಾಗಿದೆ.
೮೬ ವರ್ಷಗಳಿಂದ ಓಡುತ್ತಿರುವ ಡಬಲ್ ಡೆಕ್ಕರ್ ಬಸ್ಸುಗಳು
ಮುಂಬೈನಲ್ಲಿ ಸುಮಾರು ೮೬ ವರ್ಷಗಳಿಂದ ಡಬಲ್ ಡೆಕ್ಕರ್ ಬಸ್ಸುಗಳು ಓಡುತ್ತಿವೆ. ಕ್ರಮೇಣ ಈ ಬಸ್ಸುಗಳು ಪ್ರಮುಖ ಸಾರಿಗೆ ಸಾಧನವಾಯಿತು. ಇವುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣಿಸಲು ಆರಂಭಿಸಿದರು. ಡಬ್ಬಲ್ ಡೆಕ್ಕರ್ ಆಗಿದ್ದರಿಂದ ಬಸ್ಸಿನ ಮೊದಲ ಮಹಡಿಯಲ್ಲಿ ಕುಳಿತು ಪ್ರಯಾಣಿಸೋಣ ಎಂದು ಮಕ್ಕಳೂ ಪೋಷಕರಲ್ಲಿ ಹಠ ಹಿಡಿಯುವುದು ಸಾಮಾನ್ಯವಾಗಿತ್ತು, ಏಕೆಂದರೆ ಬಸ್ಸಿನ ಮೊದಲ ಮಹಡಿಯಲ್ಲಿ ಕುಳಿತು ಪ್ರಯಾಣಿಸುವ ಮಜವೇ ಬೇರೆ.
ನಿನ್ನೆ, ಈ ಬಸ್‌ಗಳು ರಸ್ತೆಗೆ ಬಂದಾಗ, ಅವುಗಳನ್ನು ಹೂವಿನಿಂದ ಅಲಂಕರಿಸಲಾಗಿತ್ತು, ಜನರು ಕೂಡ ಬೆಸ್ಟ್‌ನ ಡಬಲ್ ಡೆಕ್ಕರ್ ಬಸ್‌ಗಳಲ್ಲಿ ಪ್ರಯಾಣಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬಂದರು. ಹಳೆ ಡಬ್ಬಲ್ ಡೆಕ್ಕರ್ ಬಸ್ ಗೆ ವಿದಾಯ ಹೇಳುವಾಗ ಪ್ರಯಾಣಿಕರು ಈ ಬಸ್ ನ ಕೊನೆಯ ಪ್ರಯಾಣವನ್ನು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆ ಹಿಡಿಯುತ್ತಿದ್ದರು.
ಫೆಬ್ರವರಿಯಿಂದ ಮುಂಬೈನ ರಸ್ತೆಗಳಲ್ಲಿ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್‌ಗಳು ಓಡುತ್ತಿವೆ.