ಇತಿಹಾಸ ನಿರ್ಮಿಸಿದ ರೊನಾಲ್ಡೊ: ಘಾನಾ ವಿರುದ್ಧ ಪೋರ್ಚುಗಲ್‌ಗೆ ಜಯ

ದೋಹಾ (ಕತಾರ್‌), ನ.೨೪- ಘಾನಾ ವಿರುದ್ಧ ೩-೨ರ ರೋಚಕ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಪೋರ್ಚುಗಲ್‌ ವಿಶ್ವಕಪ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಅತ್ತ ವಿಶ್ವದ ಸ್ಟಾರ್‌ ಆಟಗಾರ ಪೋರ್ಚುಗಲ್‌ನ ಕ್ರಿಸ್ತಿಯಾನೊ ರೊನಾಲ್ಡೊ ಒಂದು ಗೋಲು ಗಳಿಸುವ ಮೂಲಕ ಐದು ವಿಭಿನ್ನ ಫುಟ್ಬಾಲ್‌ ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಲಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಪಂದ್ಯದ ದ್ವಿತೀಯಾರ್ಧದಲ್ಲೇ ಐದು ಗೋಲುಗಳು ದಾಖಲಾಗಿ, ಪಂದ್ಯಕ್ಕೆ ಮತ್ತಷ್ಟು ರೋಚಕತೆ ನೀಡಿತು.


ಇಲ್ಲಿನ ರಾಸ್‌ ಅಬೌ ಅಬೋದ್‌ ಸ್ಟೇಡಿಯಂನಲ್ಲಿ ನಡೆದ ʻಹೆಚ್‌ʼ ಗುಂಪಿನ ಪಂದ್ಯದ ಮೊದಲಾರ್ಧದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಈ ಅವಧಿಯಲ್ಲಿ ರೊನಾಲ್ಡೊ ಗೋಲು ಗಳಿಸಿದರೂ ಅದನ್ನು ರೆಫ್ರಿ ಪುರಸ್ಕರಿಸಲಿಲ್ಲ. ಈ ಹಿನ್ನೆಲೆಯಲ್ಲಿ ಮೊದಲಾರ್ಧದಲ್ಲಿ ಶೂನ್ಯ ಗೋಲು ಗಳಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪಂದ್ಯದ ಮೊದಲಾರ್ಧ ನೀರಸ ಆಟವನ್ನೇ ನೀಡಿತು. ಆದರೆ ದ್ವಿತೀಯಾರ್ಧದಲ್ಲಿ ಎರಡೂ ತಂಡಗಳು ಅಕ್ಷರಶಃ ಅತ್ಯದ್ಬುತ ಹೋರಾಟವೇ ನಡೆಯಿತು. ಅದೂ ಅಲ್ಲದೆ ಹಲವು ಆಟಗಾರರು ಹಳದಿ ಕಾರ್ಡ್‌ ಪಡೆದುಕೊಂಡು, ದಂಡಿತರಾದರು. ಇನ್ನು ದ್ವಿತೀಯಾರ್ಧದ ೬೫ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿಯನ್ನು ರೊನಾಲ್ಡೊ ಗೋಲಾಗಿ ಪರಿವರ್ತಿಸಿ, ಪೋರ್ಚುಗಲ್‌ಗೆ ಮೊದಲ ಮುನ್ನಡೆ ತಂದುಕೊಟ್ಟರು. ಈ ಮೂಲಕ ಐದು ವಿಭಿನ್ನ ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಲಿಕೆಗೆ ರೊನಾಲ್ಡೊ ಪಾತ್ರರಾದರು. ಆದರೆ ಪೋರ್ಚುಗಲ್‌ನ ಈ ಸಂತಸ ಹೆಚ್ಚು ಹೊತ್ತು ಉಳಿಯಲಿಲ್ಲ. ೭೩ನೇ ನಿಮಿಷದಲ್ಲಿ ಅಯೆವ್‌ ಆಕರ್ಷಕ ರೀತಿಯಲ್ಲಿ ಗೋಲು ಗಳಿಸಿ, ಘಾನಾ ಸಮಬಲ ಸಾಧಿಸುವಲ್ಲಿ ನೆರವಾದರು. ಆದರೆ ಮತ್ತೆ ಐದು ನಿಮಿಷ ಕಳೆಯುವಷ್ಟರಲ್ಲಿ ಫೆಲಿಕ್ಸ್‌ಗೆ ಪೋರ್ಚುಗಲ್‌ಗೆ ಮತ್ತೊಮ್ಮೆ ಮುನ್ನಡೆ ತಂದುಕೊಟ್ಟರು. ಅಲ್ಲದೆ ೮೦ನೇ ನಿಮಿಷದಲ್ಲಿ ಲಾವ್‌ ಮತ್ತೊಂದು ಗೋಲು ಗಳಿಸಿ, ಮುನ್ನಡೆಯನ್ನು ೩-೧ಕ್ಕೆ ಏರಿಸಿದರು. ಇನ್ನು ಪಂದ್ಯದ ನಿಗದಿತ ಅವಧಿಗೆ ಮುಕ್ತಾಯಕ್ಕೆ ಒಂದು ನಿಮಿಷ ಬಾಕಿ ಉಳಿದಿರುವಾಗ ಘಾನಾ ಪರ ಬುಖಾರಿ ಗಳಿಸಿದ ಗೋಲು, ಸ್ಟೇಡಿಯಂನಲ್ಲಿ ನೆರೆದ ಘಾನಾ ಅಭಿಮಾನಿಗಳನ್ನು ಹೆಚ್ಚೆದ್ದು ಕುಣಿಯುವಂತೆ ಮಾಡಿತು. ಈ ಹಿನ್ನೆಲೆಯಲ್ಲಿ ೯ ನಿಮಿಷಗಳ ಹೆಚ್ಚುವರಿ ಅವಧಿಯನ್ನು ನೀಡಲಾಯಿತು. ಆದರೆ ಹೆಚ್ಚುವರಿ ಅವಧಿಯಲ್ಲಿ ಯಾವುದೇ ಗೋಲು ದಾಖಲಾಗದ ಹಿನ್ನೆಲೆಯಲ್ಲಿ ಅಂತಿಮವಾಗಿ ಪಂದ್ಯವನ್ನು ಪೋರ್ಚುಗಲ್‌ ೩-೨ ಅಂತರದಲ್ಲಿ ಗೆದ್ದುಕೊಂಡು, ೩ ಅಂಕ ಸಂಪಾದಿಸಿಕೊಂಡಿತು.