ಇತಿಹಾಸ ಎಂದರೆ ದ್ರಾವಿಡರ ಆರ್ಯರ ಸಂಘರ್ಷ : ಅಕ್ಷತಾ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.09: ದಲಿತ ಸಂಘರ್ಷ ಸಮಿತಿ ಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಅವರ 85 ನೇ ಜನ್ಮ ದಿನಾಚರಣೆ  ನಿಮಿತ್ತ ನಗರದ ಬಿಡಿಏಏ ಸಭಾಂಗಣದಲ್ಲಿ ಇಂದು ರಾಜ್ಯ ಮಟ್ಟದ ಬಹುಜನರ ಐಕ್ಯತಾ ಸಮಾವೇಶ ನಡೆಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಭೀಮವಾದದ ರಾಜ್ಯ ಸಮಿತಿ ಮೈಸೂರಿನ ಉರಿಲಿಂಗ ಪೆದ್ದ ಮಠದ ಜ್ಣಾನ ಪ್ರಕಾಶ್ ಸ್ವಾಮೀಜಿಗಳ ಸಾನಿಧ್ಯದಲ್ಲಿ ಇದನ್ನು ಆಯೋಜಿಸಿತ್ತು.
ಕರ್ನಾಟಕ ರಾಜ್ಯ ಲೈಂಗಿಕ ಅಲ್ಪಸಂಖ್ಯಾತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಅಕ್ಷತಾ ಸಮಾವೇಶ ಉದ್ಘಾಟಿಸಿ, ಭಾರತದ ಇತಿಹಾಸ ಎಂದರೆ ಆರ್ಯ-ದ್ರಾವಿಡ ನಡುವಿನ ಸಂಘರ್ಷವಾಗಿದೆಂದು ಉದಾಹರಣೆ ಸಮೇತ ತಿಳಿಸಿದರು.
ಮನುವಾದಿಗಳು ಹಸಿ ಸುಳ್ಳುಗಳನ್ನು ಈ ದೇಶದ ಮೂಲ ನಿವಾಸಿಗಳ ತಲೆಗೆ ತುಂಬಿದರು, ಧರ್ಮ, ದೇವರು, ಆಚಾರ, ವಿಚಾರ, ಮೈಲಿಗೆ, ಮಡಿ ಮೊದಲಾಗಿ ಹೇಳಿ ಈ ಮೂಲ‌ ನಿವಾಸಿಗಳನ್ನು ತುಳಿಯತೊಡಗಿದರು.
ಸೂರ್ಯನಿಂದ ಮಕ್ಕಳು ಅಗಲು ಸಾಧ್ಯವೇ, ಯಾರಾದರು ತೋರಿಸಲಿ. ಆದರೆ ಕರ್ಣ ಸೂರ್ಯನಿಂದ ಹುಟ್ಟಿದನೆಂದು ಹೇಳುತ್ತಾರೆ ಹೇಗೆ ಸಾಧ್ಯ.
ಮನುವಾದಿಗಳು  ಹೇಳುತ್ತಾರೆ ಶೂದ್ರರು ಪಾದದಿಂದ ಹುಟ್ಟಿದವರು ಎನ್ನುತ್ತಾರೆ. ಪಾದದಿಂದ ಹುಟ್ಟಿಲ್ಲ. ಎಲ್ಲರೂ ಅವರವರ ತಾಯಿ ಹೊಟ್ಟೆಯಿಂದ ಹುಟ್ಟಿದವರೆಂದರು.
ಸೈದ್ಧಾಂತಿಕವಾಗಿ ಬದಲಾದಾಗ ಮಾತ್ರ ಈ ದೇಶದ ಬದಲಾವಣೆ ಆಗಲು ಸಾಧ್ಯವಿಲ್ಲವೆಂದರು.
ಸೈದ್ಧಾಂತಿಕತೆಯ ಮೇಲೆ ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜವನ್ನು ಕಂಡರು. ಅದಕ್ಕಾಗಿ ದೇಶಕ್ಕೆ ಸಂವಿಧಾನ ಅವಶ್ಯ ಎಂದು ಕಂಡುಕೊಂಡರು. ಸಂವಿಧಾನ ಬಂದರೂ ಇನ್ನೂ ತಳ ಸಮುದಾಯದ ಮೇಲೆ ತುಳಿತ ನಿಲ್ಲುತ್ತಿಲ್ಲ. ಕಾರಣ ಮನುವಾದಿಗಳಿಂದಾಗಿ ಎಂದ ಅಕ್ಷತಾ, ಇಂದು ದೇಶದಲ್ಲಿ ಶೂದ್ರರು ಅಧಿಕಾರ ಹೊಂದಿದ್ದಾರೆಂದರೆ ಅದು ಸಂವಿಧಾನದಿಂದಾಗಿ ಎಂದರು. ಅಂಬೇಡ್ಕರ್ ಅವರ ಹೋರಾಟದ ಮಜಲುಗಳನ್ನು ಅರಿತುಕೊಂಡು ಪ್ರೊ.ಬಿ.ಕೃಷ್ಣಪ್ಪ ಅವರು ರಾಜ್ಯದಲ್ಲಿ ಸಂಘಟನೆ ಮೂಲಕ ಹೋರಾಟ ನಡೆಸಿ ಎರಡನೇ ಅಂಬೇಡ್ಕರ್ ಎಂದು ಕರೆಸಿಕೊಂಡರೆಂದರು.
ಹೋರಾಟಕ್ಕೆ 1984 ರಲ್ಲಿ ಡಿಎಸ್ ಎಸ್ ಕಟ್ಟಿದರು. ಆದರೆ ಅವರ ಆಶಯಗಳನ್ನು ಈಗ ಸಂಘಟನೆಗಳು ಈಡೇರಿಸುತ್ತಿದೆಯಾ ಎಂದು ಪ್ರಶ್ನಿಸಿದರು.
ಕೃಷ್ಣಪ್ಪ ಅವರ ಹೆಸರು ಹೇಳಿಕೊಂಡು, ಚಿನ್ನದ ಸರ, ಕಡಗ ತೊಟ್ಟು, ದೊಡ್ಡ ದೊಡ್ಡ ಕಾರುಗಳು, ಬಂಗಲೆಗಳನ್ನು ಕಟ್ಟಿಕೊಂಡು ಬಿಳಿ ಅಂಗಿ, ಪ್ಯಾಂಟ್ ತೊಟ್ಟು  ಓಡಾಡುವ ದಲಿತ ಲೀಡರ್ ಗಳು ನಿಮ್ಮ ಜನಕ್ಕೆ ನೀವು ಏನು ಮಾಡಿದ್ದೀರಿ ಎಂದು ಪ್ರಶ್ನಿಸಿಕೊಳ್ಳಿ ಎಂದರು.
ಅಂಬೇಡ್ಕರ್, ಕೃಷ್ಣಪ್ಪ ಅವರ ಜಯಂತಿ ಆಚರಣೆ ಎಂದರೆ ಮಧ್ಯ ಸೇವನೆ ಮಾಡಿ, ಪಾನ್ ಪರಾಗ್ ಹಾಕಿಕೊಂಡು ಉಗುಳುತ್ತ ಕುಣಿದು ಕುಪ್ಪಳಿಸುವುದಲ್ಲ ಅವರ ಸಿದ್ದಾಂತ, ಆದರ್ಶಗಳನ್ನು ಮೈಗೂಡಿಸಿಕೊಳ್ಳುವುದಾಗಬೇಕು ಎಂದರು.
ಚಂದ್ರಗುತ್ತಿಯಲ್ಲಿನ ಬೆತ್ತಲ ಸೇವೆ ನಿಲ್ಲಿಸಲು ಪ್ರಮುಖವಾದ ಹೋರಾಟ ಮಾಡಿ ನಿಲ್ಲಿಸಿದವರು ಕೃಷ್ಣಪ್ಪನವರೆಂದರು.
ಸಂಘಟನೆಯ ರಾಜ್ಯ ಸಂಚಾಲಕ ಪರುಶುರಾಮ ನೀಲನಾಯಕ್ ಅಧ್ಯಕ್ಷತೆವಹಿಸಿದ್ದರು. ರಾಜ್ಯ ಸಂಘಟನಾ ಸಂಚಾಲಕರಾದ  ಡಿ.ನಾರಾಯಣ, ಗ್ಯಾನಪ್ಪ ಬಡಿಗೇರ್, ಎಂ.ಸಿ. ನಾರಾಯಣ, ಸಂಜೀವ ಕಾಂಬ್ಳೆ,  ಎಂ.ಚಂದ್ರಶೇಖರ, ಭೀಮರಾಮ ಈ ಸಿಂದಗೇರಿ, ಕೆ.ಭೈರಪ್ಪ, ಜಿಲ್ಲಾ ಸಂಚಾಲಕ ಸಂಗನಕಲ್ಲು ವಿಜಯಕುಮಾರ್, ರಾಜ್ಯ ಸಮಿತಿ ಸದಸ್ಯರಾದ ಓಂಕಾರಪ್ಪ ಕಪ್ಪಗಲ್ಲು, ಜಯಶೀಲನ್, ಕೆ.ಕುಮಾರ್, ಜಿಲ್ಲಾ ಸಮಿತಿಯ ಮುಖಂಡರು ಉಪಸ್ಥಿತರಿದ್ದರು.