ಇತಿಹಾಸ ಅರಿತವರು ಮಾತ್ರ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ; ಬಾ.ಮ.ಬಸವರಾಜಯ್ಯ

ಸಂಜೆವಾಣಿ ವಾರ್ತೆ

ದಾವಣಗೆರೆ.ಜ.30;ನಮ್ಮ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನಮ್ಮ ಇತಿಹಾಸ ಹಾಗೂ ಸಂವಿಧಾನಗಳ ಬಗ್ಗೆ ಅರಿವು ಮೂಡಿಸುವುದನ್ನು ನಮ್ಮ ಶಿಕ್ಷಕ ವರ್ಗ ತಪ್ಪದೇ ನಿರ್ವಹಿಸಬೇಕು. ಇತಿಹಾಸ ಅರಿತವರು ಮಾತ್ರ ಭವಿಷ್ಯವನ್ನು ಕಟ್ಟಿಕೊಳ್ಳಲು ಸಾದ್ಯವಾಗುತ್ತದೆ ಎಂದು ಹಿರಿಯ ಪತ್ರಕರ್ತ ಹಾಗೂ ಲೇಖಕ ಬಾ.ಮ. ಬಸವರಾಜಯ್ಯ ಶಿಕ್ಷಕವೃಂದಕ್ಕೆ ಕರೆಕೊಟ್ಟರು.  ಅವರು ನಿಜಲಿಂಗಪ್ಪ ಬಡಾವಣೆಯ ನ್ಯಾಷನಲ್ ಕಾನ್ವೆಂಟ್ ಶಾಲೆಯಲ್ಲಿ ಗಣರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಯಾಗಿ ಪಾಲ್ಗೊಂಡಿದ್ದರು ಮಾತನಾಡುತ್ತಿದ್ದರು.   ಮಕ್ಕಳಿಗೆ ಪೋಷಕರು, ಶಿಕ್ಷಕರು ಕೇವಲ ವೈದ್ಯಕೀಯ, ಇಂಜಿನಿಯರಿಂಗ್ ಪಡೆಯುವ ಬಗ್ಗೆಯೇ ತಲೆ ತುಂಬುವುದು ದೊಡ್ಡ ತಪ್ಪು. ಈಗ ಇದೊಂದು ಶೈಕ್ಷಣಿಕ ಪಿಡುಗಾಗಿ ಪರಿಣಿಮಿಸಿದೆ. ಮಕ್ಕಳ ಆಸಕ್ತಿ ಗಮನಿಸಿ ಶಿಕ್ಷಣ ಕೊಡಬೇಕು.  ಅವರಿಗೆ ನಮ್ಮ ಸಾಹಿತ್ಯ, ಸಂಸ್ಕೃತಿ, ಜಾನಪದ ಭವ್ಯವಾದ ಪರಂಪರೆಯ ಬಗ್ಗೆ ತಿಳಿಸಿಕೊಟ್ಟ ಆ ಬಗ್ಗೆ  ತೊಡಗಿಸಿಕೊಳ್ಳುವಂತೆ ಅಧ್ಯಾಪಕ ವರ್ಗದವರು ಆಸಕ್ತಿ ಕೆರಳಿಸಬೇಕು ಎಂದರು.  ಯುವ ಪೀಳಿಗೆಗೆ ಶಿಕ್ಷಣ-ಸ್ವಾಭಿಮಾನದ ಬಗ್ಗೆ ಡಾ.ಅಂಬೇಡ್ಕರ್ ಅವರು ಸದಾ ಒತ್ತಿ ಹೇಳುತ್ತಿದ್ದರು ಎಂದು ಅಂಬೇಡ್ಕರ್ ಅವರ ಸಿದ್ದಾಂತದ ಬಗ್ಗೆ ಮಕ್ಕಳಿಗೆ ತಿಳಿಸಿದರು.ಶಾಲಾ ಆಡಳಿತ ಮಂಡಳಿ ಮುಖ್ಯಸ್ಥೆ ಶ್ರೀಮತಿ ಸಹನಾ ರವಿ ಅಧ್ಯಕ್ಷತೆ ವಹಿಸಿ ಗಣರಾಜ್ಯೋತ್ಸವದ ಮಹಾತ್ವ ವಿವರಿಸಿದರು.  ಆಟೋಟ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.