ಇತಿಹಾಸ ಅಧ್ಯಯನ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಿ

ದೇವದುರ್ಗ,ಜು.೧೩-
ವಿದ್ಯಾರ್ಥಿಗಳು ಶಿಕ್ಷಣವನ್ನು ಕೇವಲ ಅಂಕಗಳಿಸಲು ಮಾತ್ರ ಕಲಿಯದೆ ಜ್ಞಾನಾರ್ಜನೆಗಾಗಿ ಕಲಿಯಬೇಕಿದೆ. ಇತಿಹಾಸ ವಿಷಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಗತಕಾಲದ ಇತಿಹಾಸ ಅರಿಯಬೇಕು ಎಂದು ಪ್ರಥಮ ದರ್ಜೆ ಕಾಲೇಜು ಪ್ರಭಾರ ಪ್ರಾಚಾರ್ಯೆ ಡಾ.ಫಾತಿಮಾ ಹಸನ್ನಾಬೇಗಂ ಹೇಳಿದರು.
ಪಟ್ಟಣದ ಶ್ರೀಶರಣಪ್ಪ ಮುರಿಗೆಪ್ಪ ಖೇಣೇದ್ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೩-೨೪ನೇ ಸಾಲಿನ ಇತಿಹಾಸ ಸ್ನಾತಕೋತ್ತರ ವಿಭಾಗದ(ಎಂಎ) ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಉತ್ತಮ ಭವಿಷ್ಯ ಕಾಲೇಜಿನ ನಾಲ್ಕು ಗೋಡೆಗಳ ಮಧ್ಯ ನಿರ್ಮಾಣವಾಗುತ್ತಿದೆ. ನಿರಂತರ ಅಧ್ಯಯನದಿಂದ ಯಶಸ್ಸು ಸಾಧಿಸಲು ಸಾಧ್ಯವಿದೆ.
ರಾಯಚೂರು ವಿಶ್ವವಿದ್ಯಾಲಯದಿಂದ ನಮ್ಮ ತಾಲೂಕಿನಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ಇತಿಹಾಸ ಅಧ್ಯಯನ ಆರಂಭವಾಗಿದೆ. ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ತುಂಬ ಅನುಕೂಲವಾಗಲಿದೆ. ಸ್ಥಳೀಯರು ಇದರ ಸದ್ಬಳಕೆ ಮಾಡಿಕೊಂಡು ಪದವಿ ಪಡೆಯಬೇಕು. ದುಶ್ಚಟಗಳಿಂದ ದೂರವಿದ್ದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಸಹಾಯಕ ಪ್ರಾಧ್ಯಾಪಕ ಸುಭಾಷ್‌ಚಂದ್ರ ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳು ಹಿಂದಿನ ಇತಿಹಾಸವನ್ನು ತಿಳಿದುಕೊಂಡು ಮುಂದಿನ ಹೊಸ ಇತಿಹಾಸವನ್ನು ನಿರ್ಮಾಣ ಮಾಡಿದಾಗ ಮಾತ್ರ ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯ ಎಂದರು. ಕನ್ನಡ ಸಾಹಿತ್ಯ ಪ್ರಾಧ್ಯಾಪಕ ಡಾ.ಮಲ್ಲಯ್ಯ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಬಿ.ಜಿ.ಅನಂತ್, ಅತಿಥಿ ಉಪನ್ಯಾಸಕರಾದ ಮುನಿಯಪ್ಪ ನಾಗೊಲಿ, ಶೈಲಜಾ ಇತರರಿದ್ದರು.