ಇತರೆ ಪಕ್ಷಗಳ ಜೊತೆ ಜೆಡಿಎಸ್ ವಿಲೀನ ಅಥವಾ ಹೊಂದಾಣಿಕೆ ಮಾಡಬಾರದು

ಮಂಗಳೂರು, ಡಿ.೨೯- ಪ್ರಸ್ತುತ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ. ಈಗ ಬೇರೆ ಬೇರೆ ಪಕ್ಷದಲ್ಲಿ ಇರುವವರು ಜನತಾ ಪರಿವಾರ ಫ್ಯಾಕ್ಟರಿಯಿಂದ ತಯಾರಾದವರು. ಇಂತಹ ಸನ್ನಿವೇಶದಲ್ಲಿ ಜನತಾ ಪರಿವಾರ ಒಗ್ಗೂಡಿದರೆ ಅದೊಂದು ಅದ್ಭುತ ಧ್ರುವೀಕರಣವಾಗುತ್ತದೆ ಎಂದು ವೈಎಸ್‌ವಿ ದತ್ತಾ ಅಭಿಪ್ರಾಯಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಇತರ ಪಕ್ಷಗಳ ಜೊತೆ ವಿಲೀನ ಅಥವಾ ಹೊಂದಾಣಿಕೆ ಮಾಡಬಾರದು ಎಂಬುದೇ ನಮ್ಮ ನಿಲುವು ಎಂದರು. ಪ್ರಾದೇಶಿಕ ಪಕ್ಷವಾಗಿ ನಿರ್ಣಾಯಕ ಪಾತ್ರ ವಹಿಸುವುದು ಇಂದಿನ ದಿನಗಳಲ್ಲಿ ಮುಖ್ಯವಾಗಿದೆ. ಈ ಹಿಂದೆ ರಾಜ್ಯದಲ್ಲಿ ಜೆಡಿಎಸ್ ಆಡಳಿತದ ಕೀರ್ತಿಯನ್ನು ಜನತೆ ಇನ್ನೂ ನೆನಪಿನಲ್ಲಿ ಇರಿಸಿದ್ದಾರೆ. ಹಾಗಾಗಿ ಕಾಂಗ್ರೆಸ್‌ನಿಂದ ಇಬ್ರಾಹಿಂ ಮರಳಿ ಬಂದರೂ ಪಕ್ಷಕ್ಕೆ ಒಳ್ಳೆಯದೇ ಎಂದವರು ಹೇಳಿದರು. ವಿಧಾನ ಪರಿಷತ್ ಸಭಾಪತಿ ಸ್ಥಾನ ಅವಿಶ್ವಾಸ ನಿರ್ಣಯ ಹಾಗೂ ಕೃಷಿ ವಿಧೇಯಕಕ್ಕೆ ಪರಿಷತ್‌ನಲ್ಲಿ ಜೆಡಿಎಸ್ ಒಪ್ಪಿಗೆ ಸೂಚಿಸಿರುವುದು, ಈ ಎರಡು ವಿಷಯದಲ್ಲಿ ಬಿಜೆಪಿಗೆ ನೆರವು ನೀಡಿದ ಕ್ರಮಕ್ಕೆ ವೈಯಕ್ತಿಕವಾಗಿ ನಾನು ವರಿಷ್ಠರಲ್ಲಿ ಆಕ್ಷೇಪಿಸಿದ್ದೇನೆ.
ಮುಂದಿನ ದಿನಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಸಮಾನ ದೂರದಲ್ಲಿ ಜೆಡಿಎಸ್ ನಿಂತು ಪ್ರಮುಖ ಪ್ರಾದೇಶಿಕ ಪಕ್ಷವಾಗಿ ಬೇರೂರಬೇಕು ಎಂದು ಪಕ್ಷದ ವರಿಷ್ಠರಲ್ಲಿ ವಿನಂತಿಸಿರುವುದಾಗಿ ಅವರು ಹೇಳಿದರು. ಬಿಜೆಪಿ ಜೊತೆ ಜೆಡಿಎಸ್ ವಿಲೀನದ ಪ್ರಸ್ತಾಪವನ್ನು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೇ ಅಲ್ಲಗಳೆದಿದ್ದಾರೆ. ಜನವರಿ ೭ರಂದು ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇ ಗೌಡರೇ ಈ ಬಗ್ಗೆ ನಿಲುವನ್ನು ಸ್ಪಷ್ಟಪಡಿಸಲಿದ್ದಾರೆ ಎಂದರು. ಕೋವಿಡ್‌ನ ಈ ಸನ್ನಿವೇಶದಲ್ಲಿ ರಾಜ್ಯದಲ್ಲಿ ಶಾಲಾರಂಭಕ್ಕೆ ತರಾತುರಿ ಮಾಡಬಾರದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಲ್ಲಿ ವಿನಂತಿಸಿದ್ದೇನೆ. ಮಕ್ಕಳಿಗೆ ಯಾವ ಸಿಲೆಬಸ್ ಇದೆ, ಎಷ್ಟು ಪಾಠ ಮಾಡಬೇಕು ಎಂಬಿತ್ಯಾದಿ ಖಚಿತಗೊಳ್ಳದೆ ಕೊನೆಗೆ ಪರೀಕ್ಷೆ ಮಾಡಿದರೆ ಏನು ಪ್ರಯೋಜನ ಈಗಾಗಲೇ ಶೈಕ್ಷಣಿಕ ವರ್ಷದ ಶೇ.೭೦ ಭಾಗ ಮುಕ್ತಾಯಗೊಂಡಿದೆ.
ನಾನು ಕೂಡ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಮಾಡುತ್ತಿದ್ದೇನೆ. ಉಳಿದ ಅವಧಿಯಲ್ಲಿ ಶಾಲಾರಂಭ ಬದಲು ಈ ವರ್ಷವನ್ನು ಶೂನ್ಯ ಶೈಕ್ಷಣಿಕ ವರ್ಷ ಎಂದು ಪರಿಗಣಿಸ ಬೇಕು ಎಂದು ವೈಎಸ್‌ವಿ ದತ್ತಾ ಒತ್ತಾಯಿಸಿದರು.