ಇತರೆ ಇಲಾಖೆಗಳಿಂದ ಭಿನ್ನವಾದ ಕೃಷಿ ಇಲಾಖೆ ಅಫಜಲಪುರ: ಮಧ್ಯ ರಾತ್ರಿ ಆರಂಭವಾದ ಕೃಷಿ ಇಲಾಖೆ

ಎ.ಬಿ.ಪಟೇಲ ಸೊನ್ನ

ಅಫಜಲಪುರ:ಮಾ.27: ಸರಕಾರ ಕೃಷಿ ಇಲಾಖೆಗೆ ಪ್ರತ್ಯೇಕ ಆದೇಶ ಹೊರಡಿಸಿದಂತಿದೆ. ಕಾರಣ ಹಗಲು ಹೊತ್ತು ಕಳ್ಳರು ಕಳ್ಳತನ ಮಾಡುವುದಿಲ್ಲ. ರಾತ್ರಿ ಹೊತ್ತು ಎನ್ನುವುದನ್ನು ಅರಿತುಕೊಂಡಂತೆ ಇಲ್ಲಿನ ಸಹಾಯಕ ಕೃಷಿ ನಿರ್ದೇಶಕ ಎಚ್.ಎಚ್ ಗಡಗಿಮನಿ ಅವರು ಅಫಜಲಪುರ ಕೃಷಿ ಇಲಾಖೆ ಶುಕ್ರವಾರ ರಾತ್ರಿ ಆರಂಭಿಸಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ ಎನ್ನುವಂತಿದೆ. ಏಕೆಂದರೆ, ರೈತರು ಕೂಡಾ ಹಗಲು ಹೊತ್ತಿನಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗುತ್ತಿರುವುದರಿಂದ ಅವರ ಕೆಲಸ ಕಾರ್ಯಗಳಿಗೆ ರಾತ್ರಿ ಕೃಷಿ ಇಲಾಖೆಗೆ ಬರಲು ಅನುಕೂಲವಾಗುತ್ತದೆ ಎನ್ನುವ ಭಾವನೆಯಿಂದ ಈ ಕಾರ್ಯಕ್ಕೆ ಕೈ ಹಾಕಿದಂತಿದೆ. ಹಗಲು ಹೊತ್ತು ಕಛೇರಿ ಅವಧಿಯಲ್ಲಿಯೇ ರೈತರ ಕೆಲಸ ಕಾರ್ಯಗಳಿಗೆ ಸ್ಪಂದಿಸದೆ ಇರುವ ಇಲ್ಲಿನ ಗನಂಧಾರಿ ಅಧಿಕಾರಿ ಮತ್ತು ಸಿಬ್ಬಂದಿಗಳು ಶುಕ್ರವಾರ ರಾತ್ರಿ ಹೊತ್ತು ಕಛೇರಿಯಲ್ಲಿದ್ದುಕೊಂಡು, ಟೇಬಲ್ ಮೇಲೆ ಊಟ ಮಾಡಿಕೊಂಡು, ಎಲ್ಲ ಅಲಮಾರಗಳಲ್ಲಿರುವ ಕಾಗದಗಳನ್ನು ಎತ್ತಿ ಎತ್ತಿ ಹಾಕಿ ಕೆಲಸ ಮಾಡುವುದನ್ನು ಕಂಡಾಗ ಈ ಇಲಾಖೆಗೆ ಸರಕಾರ ಅತ್ಯುನ್ನತ ಕಾಯಕ ಪ್ರಶಸ್ತಿ ಕೊಡಬೇಕು ಎಂದು ಈ ಭಾಗದ ರೈತರ ಒತ್ತಾಸೆಯಾಗಿದೆ.

ಈ ಇಲಾಖೆ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ ಅತಿಸಣ್ಣ ರೈತರಿಗೆ ಸಬ್ಸಿಡಿ ರೂಪದಲ್ಲಿ ಸಿಗುವ ಕೃಷಿ ಪರಕರಗಳು, ಯಂತ್ರೋಪಕರಣಗಳು ಇತರೆ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ನೀಡದೆ ಅನ್ಯಾಯ ಮಾಡುವಲ್ಲಿ ಕೃಷಿ ಇಲಾಖೆ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಪಾತ್ರ ಹಿರಿದಾಗಿದೆ ಎಂದರೆ ತಪ್ಪಾಗದು. ಯಾವುದಾದರೂ ಯೋಜನೆಗಳ ಕುರಿತು ರೈತರು ವಿಚಾರಿಸಿದರೆ, ಯಾವುದನ್ನು ಹೇಳದೆ ಸತಾಯಿಸುವ ಅಧಿಕಾರಿ ಮತ್ತು ಸಿಬ್ಬಂದಿ ರಾತ್ರಿ ಹೊತ್ತು ಕೆಲಸ ಮಾಡುತ್ತಿರುವುದು ಕಂಡು ದಂಗಾಗಿ ಹೋಗಿದ್ದಾರೆ. ಹಲವಾರು ಜನ ರೈತರು ಕೃಷಿ ಇಲಾಖೆಯ ನಡೆ ಕುರಿತು ಆಕ್ರೋಶ ವ್ಯಕ್ತ ಪಡಿಸಿ ಈ ಇಲಾಖೆಯಲ್ಲಿ ಸುಮಾರು ಎರಡು ದಶಕಗಳಿಂದ ಬಿಡುಬಿಟ್ಟ ಸಿಬ್ಬಂದಿ ಮತ್ತು ಇತರೆ ವರ್ಗದ ಅಧಿಕಾರಿಗಳನ್ನು ಇಲ್ಲಿಂದ ವರ್ಗಾವಣೆ ಮಾಡಿ, ಉತ್ತಮ ಕೆಲಸಗಾರರನ್ನು ನೇಮಿಸುವಂತೆ ಹಲವಾರು ಬಾರಿ ಈ ಭಾಗದ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಲ್ಲದೆ ಕೋಟ್ಯಾಂತರ ರೂಗಳ ಭ್ರಷ್ಟಾಚಾರ ಈ ಇಲಾಖೆಯಲ್ಲಿ ನಡೆದರೂ ಅಂತವರ ಆ ಬಗ್ಗೆ ಪರಿಶೀಲನೆ ಮತ್ತು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮವಾಗಿಲ್ಲ ಎನ್ನುವ ನೋವು ಈ ರೈತರಲ್ಲಿ ಸದಾ ಕಾಡುತ್ತಿದೆ. ಇದಕ್ಕೆ ಔಷಧವೇ ಸಿಗುತ್ತಿಲ್ಲ ಎನ್ನುವ ವಾದ ರೈತರದ್ದಾಗಿದೆ. ಈ ತಿಂಗಳು ಮಾರ್ಚ್ ಆಗಿದ್ದರಿಂದ ಒಂದು ವರ್ಷದ ಎಲ್ಲ ಯೋಜನೆಗಳ ಖರ್ಚು-ವೆಚ್ಚ ಆಯಾ ಲೆಕ್ಕ ಶೀರ್ಷಿಕೆಯ ಅಡಿ ಹೊಂದಾಣಿಕೆ ಮಾಡಿ, ತಿಂದು ಹಾಕುವ ಹುನ್ನಾರದಿಂದ ಕಳೆದ ಶುಕ್ರವಾರ ರಾತ್ರಿ ಕಛೇರಿಯಲ್ಲಿ ಕೆಲಸ ಆರಂಭಿಸಿದ್ದಾರೆ ಎನ್ನುವ ದೂರು ರೈತರದ್ದಾಗಿದ್ದು, ಈ ಕುರಿತು ಮೇಲಾಧಿಕಾರಿಗಳು ಮತ್ತು ಕೃಷಿ ಸಚಿವರು ಹಾಗೂ ಶಾಸಕ ಎಂ.ವೈ.ಪಾಟೀಲರು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುತ್ತಾರೆಯೇ ಎನ್ನುವುದು ಕಾದು ನೋಡಬೇಕಾಗಿದೆ.