ಇತರರಿಗೆ ಮಾದರಿ ಬಳ್ಳಾರಿ ರೈತರ  ಸೇವಾ ಸಹಕಾರ ಸಂಘ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.29: ಜಿಲ್ಲೆಯ ಕುರುಗೋಡು, ಸಂಡೂರು ಮತ್ತು ಬಳ್ಳಾರಿ ವೃತ್ತದಲ್ಲಿ  ನಮ್ಮ ಬಳ್ಳಾರಿ ರೈತರ ಸೇವಾ ಸಹಕಾರ ಸಂಘ ಇತರರಿಗೆ ಮಾದರಿಯಾಗಿದೆ ಎಂದು ಸಂಘದ ಅಧ್ಯಕ್ಷ ಎಸ್. ದೊಡ್ಡನಗೌಡ ಹೇಳಿದರು.
ಅವರು ಸಂಘದ ಸಭಾಂಗಣದಲ್ಲಿ ಬಳ್ಳಾರಿ, ಕುರುಗೋಡು ಮತ್ತು ಸಂಡೂರು ವೃತ್ತದ 90 ಕ್ಕೂ ಹೆಚ್ಚು ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರಿಗೆ ಬಳ್ಳಾರಿ ಕೃಷಿ ಪತ್ತಿನ ಸಹಕಾರ ಸಂಘದ ಪರಿವೀಕ್ಷಣಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು.
ನಮ್ಮ ಸೊಸೈಟಿಯು ರೈತರ ಸೇವೆಗೆಂದು 1976 ರಲ್ಲಿ ಆರಂಭಗೊಂಡಿತು. ಅಂದು ಇಲ್ಲಿ ಮೂರೇ ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಆದರೆ ಇಂದು ಇಲ್ಲಿ 18 ಜನ ಸಿಬ್ಬಂದಿ ಕೆಲಸ ಮಾಡುವಂತೆ ಬೆಳೆದಿದೆ. ಇದಕ್ಕೆ ಕಾರಣ ಸೊಸೈಟಿಯಲ್ಲಿ ಐದು ಸಾವಿರಕ್ಕೂ ಹೆಚ್ಚು ಇರುವ ಸದಸ್ಯರು ಮತ್ತು ಸಿಬ್ಬಂದಿಯ, ನಿರ್ದೇಶಕರುಗಳ ಸಹಕಾರವಾಗಿದೆಂದರು. ನಮ್ಮ ಸೊಸೈಟಿಯು ಎತ್ತಿನ ಬೂದಿಹಾಳ್ ಗ್ರಾಮದಲ್ಲಿ ಶಾಖೆಯನ್ನು ಹೊಂದಿದೆ. ಬಳ್ಳಾರಿ ತಾಲೂಕಿನ 17 ಹಳ್ಳಿಗಳ ವ್ಯಾಪ್ತಿಯನ್ನು ಹೊಂದಿದೆ. ಬ್ಯಾಂಕ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತ ರೈತರಿಗೆ ಚಿನ್ನದ ಮೇಲೆ ಸಹ ಸಾಲ ನೀಡುತ್ತಿದೆ. ಅಲ್ಲದೆ ಒಂದು ನೂರು ಲಾಕರ್ ಗಳನ್ನು ಸಹ ಹೊಂದಿದೆ. ಲ್ಯಾಂಡ್ ಡೆವಲಪ್ ಮೆಂಟ್, ಬೆಳೆಸಾಲ ನೀಡುತ್ತದೆ. ರಸಗೊಬ್ಬರ ಮಾರಾಟ ಹೀಗೆ  ರೈತರಿಗೆ ಎಲ್ಲಾ ರೀತಿಯ  ಸಹಕಾರ ಮಾಡುವುದೇ ನಮ್ಮ ಉದ್ದೇಶವಾಗಿದೆಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಜಿ.ಎಂ.ವೀರಭದ್ರಯ್ಯ ಅವರು ಮಾತನಾಡಿ, ಈ ಸೊಸೈಟಿ ಆರಂಭದಿಂದಲೂ ಲಾಭದಾಯಕವಾಗಿಯೇನು ಬಂದಿಲ್ಲ 2001 ರಲ್ಲಿ ಸೂಪರ್ ಸೀಡ್ ಹಂತಕ್ಕೆ ಬಂದಿತ್ತು. ಆದರೆ ಅಂದಿನ ಅನೇಕ ಸದಸ್ಯರ ಪ್ರಯತ್ನದಿಂದ  ಹಾಗೇ ಮುಂದುವರೆದು 2011-12 ನೇ ಸಾಲಿನಿಂದ ನಿರಂತರವಾಗಿ ಲಾಭದಾಯಕವಾಗಿ ಮುನ್ನಡೆದಿದೆ. ಇದೇ ರೀತಿ ಸುಸೈಟಿಗಳು ರೈತರ ಅಗತ್ಯತೆಗಳನ್ನು ಗಮನಿಸಿ ವ್ಯವಹಾರ ಮಾಡುವ ಮೂಲಕ ಅಭಿವೃದ್ಧಿಯತ್ತ ಸಾಗಬೇಕು ಎಂದರು.
ಈ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕರಾದ ಹೆಚ್.ಅಮೀನಾ ಬೇಗಂ ಅವರು ಸೊಸೈಟಿಯ ಕಾರ್ಯವೈಖರಿಯ ಬಗ್ಗೆ ತಿಳಿಸುತ್ತ. ಇಲ್ಲಿನ ಮಿನಿ ಸೂಪರ್ ಮಾರ್ಕೆಟ್ ಮೂಲಕ ವ್ಯವಹಾರ ಮಾಡಿ  ವಾರ್ಷಿಕ 5 ರಿಂದ 10 ಲಕ್ಷ ರೂ ಲಾಭಗಳಿಸುತ್ತಿದೆ. ನಮ್ಮ ಸೊಸೈಟಿ ಸಧ್ಯ  30 ಕೋಟಿ ರೂ ಡೆಪಾಸಿಟ್ ಹೊಂದಿದ್ದು ವಾರ್ಷಿಕ 12 ರಿಂದ 15 ಲಕ್ಷ ರೂ ನಿವ್ವಳ ಲಾಭಗಳಿಸುತ್ತಿದೆಂದರು.
ಕಾರ್ಯಕ್ರಮದಲ್ಲಿ ಸೊಸೈಟಿಯ ಉಪಾಧ್ಯಕ್ಷ ಎರ್ರಿಸ್ವಾಮಿ, ನಿರ್ದೇಶಕರಾದ ಬಿ.ಕೆ.ಕೆರೆಕೋಡಪ್ಪ, ಎಂ.ಶ್ರೀಧರ, ಮಿಂಚೇರಿ ಮಲ್ಲಮ್ಮ, ತಿಮ್ಮಪ್ಪ, ಜಗನ್ನಾಥ, ನಾಗರಾಜ್, ಜನಾರ್ಧನ  ಮತ್ತು ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.
ಇದೇ ರೀತಿ ಸೊಸೈಟಿಗಳಿಂದ ಆಯ್ದ ರೈತರನ್ನು ಕರೆತಂದು ಈ ಸೊಸೈಟಿಯ ಅಭಿವೃದ್ಧಿ ಬಗ್ಗೆ ತಿಳಿಸಿದರೆ ಮತ್ತಷ್ಟು ಉತ್ತಮ ಕಾರ್ಯ ಆಗಲಿದೆ.

Attachments area