ಇತರರಿಗೆ ನೆರವಾಗುವುದೇ ನಿಜವಾದ ಯಶಸ್ಸು: ಡಾ.ಬಸವರಾಜ ಬಲ್ಲೂರ

ಬೀದರ:ಮಾ.24: ಕೇವಲ ತನಗಾಗಿ ಬದುಕದೆ ಇತರರಿಗೆ ನೆರವಾಗುವುದೇ ನಿಜವಾದ ಯಶಸ್ಸು ಎಂದು ಕರ್ನಾಟಕ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾದ ಡಾ.ಬಸವರಾಜ ಬಲ್ಲೂರ ಅವರು ತಿಳಿಸಿದರು.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಮರ್ಷಿಯಲ್ ಪ್ರ್ಯಾಕ್ಟಿಸ್ ವಿಭಾಗದ ಐದನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ವ್ಯಕ್ತಿ ವಿಕಸನ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ವ್ಯಕ್ತಿತ್ವ ವಿಕಸನವೆಂದರೆ ವೈಯಕ್ತಿಕ ವಿಕಸನವಾದ ಭೌತಿಕ ವಸ್ತುಗಳನ್ನು ಹೊಂದುವುದೆಂದು ಭಾವಿಸುತ್ತಿರುವುದು ವಿಪರ್ಯಾಸ. ತಾವು ಸಂತೋಷವಾಗಿರುವುದರ ಜೊತೆಗೆ ತಮ್ಮ ಸುತ್ತಲಿನ ಜನತೆಗೆ ನೆರವು ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಉಪನ್ಯಾಸಕರಾದ ಮಲ್ಲಿಕಾರ್ಜುನ ಬಿ.ಆರ್ ಮಾತನಾಡಿ, ಬೀದರ ಸರ್ಕಾರಿ ಪಾಲಿಟೆಕ್ನಿಕ್ ಸಿ.ಪಿ ವಿಭಾಗದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಲ್ಲಿ ಹೆಚ್ಚು ಸರ್ಕಾರಿ ಮತ್ತು ಅರೆ ಸರ್ಕಾರಿ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಉಪನ್ಯಾಸಕಿ ಶೈಲಜಾ ನೀಲಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು, ಪೋಷಕರು ಮತ್ತು ತಾವು ಓದಿದ ಶಿಕ್ಷಣ ಸಂಸ್ಥೆಗಳಿಗೆ ಒಳ್ಳೆಯ ಹೆಸರು ಬರುವಂತೆ ಬದುಕಬೇಕು ಎಂದು ಹಾರೈಸಿದರು.
ಸಿ.ಪಿ ವಿಭಾಗಾಧಿಕಾರಿ ಬಕ್ಕಪ್ಪ ನಿರ್ಣಾಕರ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವ್ಯಾಸಂಗಕ್ಕೆ ತೊಡಕಾಗಿ ಪರಿಣಣಮಿಸುತ್ತಿರುವ ಮೊಬೈಲ್ ಬಳಕೆಯನ್ನು ತಗ್ಗಿಸಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ದುಷ್ಚಟಗಳಿಂದ ದೂರವಿದ್ದು, ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಸಿಪಿ ವಿಭಾಗದ ವಿದ್ಯಾರ್ಥಿನಿಯರಾದ ಸ್ವಾತಿ ಗುಂಡೆರಾವ ನಿರೂಪಿಸಿದರು. ಶಿವಾನಿ ಸ್ವಾಗತಿಸಿದರು. ಪ್ರೀತಿ ವಂದಿಸಿದರು.