ಇಡೀ ಕುಟುಂಬವೇ ಕುಲಕಸುಬಲ್ಲಿ ಲೀನ ಕಂಬಳಿ ಕಾಯಕಕ್ಕೆ ಒಲಿದ ಕನಕರತ್ನ ಪ್ರಶಸ್ತಿ

ಹೊಸಪೇಟೆ, ಜ.11- ತಮ್ಮ ಕಾಯಕವನ್ನು ಶ್ರದ್ಧೆಯಿಂದ ಮಾಡಿ ಪುರಸ್ಕಾರ ಸನ್ಮಾನಗಳನ್ನು ಪಡೆದು ಬದುಕುತ್ತಿರೋ ಜನಗಳ ನಡುವೆ ಹೊಟ್ಟೆ ಪಾಡಿಗಾಗಿ ತಮ್ಮ ಕುಲಕಸುಬನ್ನು ಮಾಡಿಕೊಂಡು ಜೀವನ ನಡೆಸುವ ಜೊತೆಗೆ ಹಾಲುಮತ ಪರಂಪರೆ ಕಾಪಾಡಿಕೊಂಡು ಬಂದ ಹಳೇ ಮಲಪನಗುಡಿ ಗ್ರಾಮದ ಸುಭಧ್ರಮ್ಮ ಅವರಿಗೆ ರಾಜ್ಯಮಟ್ಟದ ಕನಕಗುರು ಪೀಠದ ಪ್ರತಿಷ್ಠಿತ ಕನಕರತ್ನ ಪ್ರಶಸ್ತಿ ಲಭಿಸಿದೆ.
ಮೂಲತಃ ಹಾಲುಮತ ಮನೆತನದ ಸುಭದ್ರಮ್ಮ ಅವರಿಗೆ ಉಣ್ಣೆಯೊಂದಿಗೆ ಅವರ ಬಾಂಧವ್ಯ ಬಳುವಳಿಯಾಗಿಯೇ ಬಂದಿದೆ ಮದುವೆಯ ನಂತರ ಗಂಡ ಕಾರಮಂಚಪ್ಪ ಅವರು ಡೊಳ್ಳುಕುಣಿತ ಪ್ರದರ್ಶನಕ್ಕಾಗಿ ಮನೆಯಿಂದ ದೂರವುಳಿದು ಬಿಡುತ್ತಿದ್ದರು. ಮನೆನಡೆಸುವ ಸಲುವಾಗಿ ತವರಿಂದ ಕಲಿತ ಕುಲಕಸುಬಾದ ಕಂಬಳಿ ನೇಯುವಿಕೆ ಶುರುಮಾಡಿದ ಸುಭದ್ರಮ್ಮ ಅವರು ಮೊದಮೊದಲು ಜೀವನ ನಿರ್ವಹಣೆಗೆ ಮಾಡುತ್ತಾ ಹಂತಹಂತವಾಗಿ ಕರಕುಶಲತೆಯನ್ನು ಹೆಚ್ಚಿಸಿಕೊಂಡು ಇಂದು ಉದ್ಯಮವಾಗಿ ರೂಪಿಸಿರುವುದಲ್ಲದೇ ತನ್ನ ನಂತರದ ಪೀಳಿಗೆಗೂ ಇದನ್ನು ಪಸರಿಸುತ್ತಿದ್ದಾರೆ.
ಕಂಬಳಿಯಿಂದ ಆರಂಭವಾದ ಕಾಯಕ ಇಂದು ಉಣ್ಣೆಯಿಂದ ದೃಷ್ಠಿ ದಾರ, ಕಂಕಣ, ಚಳಿಗಾಲಕ್ಕೆ ಟೋಪಿ, ಪರದೆ, ಹೂವಿನ ಹಾರ, ಧ್ವಜ, ಶಾಲು, ಜಡೆ ಸೇರಿದಂತೆ ಗೃಹ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ.
ಸುಭದ್ರಮ್ಮ ಅವರ ಪರಿವಾರವೇ ಕುಲಕಸುಬನ್ನು ನೆಚ್ಚಿಕೊಂಡಿದ್ದು, ಗಂಡ ಕಾರಮಂಚಪ್ಪ ಡೊಳ್ಳು ವಾದನದಲ್ಲಿ ಪರಿಣಿತರಾಗಿದ್ದು ತಂಡ ಕಟ್ಟಿಕೊಂಡು ಡೊಳ್ಳು ಕಲೆ ಪ್ರದರ್ಶಿಸುತ್ತಿದ್ದಾರೆ. ಇವರಿಗೂ ಸಹ ಹತ್ತಾರು ರಾಜ್ಯ ಪ್ರಶಸ್ತಿಗಳು ಜೊತೆಗೆ ರಾಷ್ಟ್ರ ಮಟ್ಟದಲ್ಲೂ ಪ್ರಶಸ್ತಿ ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲ ಡೊಳ್ಳು ಕಲಾ ಪ್ರದರ್ಶನವನ್ನು ನೀಡಿದ್ದಾರೆ.
ಕುಲಕಸುಬಿನೊಂದಿಗೆ ವ್ಯವಸಾಯ: ಉಣ್ಣೆಯನ್ನು ಸಂಗ್ರಹಿಸಿ 6 ತಿಂಗಳುಗಳ ಕಾಲ ಕಂಬಳ ಜೊತೆ ಇತರ ವಸ್ತುಗಳನ್ನು ತಯಾರಿಸುವ ಕುಟುಂಬ ಉಳಿದ ದಿನಗಳಲ್ಲಿ ವ್ಯವಸಾಯವನ್ನು ನಿರ್ವಹಿಸುತ್ತಾ ಬದುಕನ್ನು ಹೊಂದಿರುತ್ತಾರೆ.
ತಯಾರಿಸಿದ ಕಂಬಳಿಯನ್ನು ರಾಜ್ಯದಲ್ಲಿ ನಡೆಯುವ ಬಹುತೇಕ ಎಲ್ಲಾ ಜಾತ್ರೆಗಳಲ್ಲೂ ಮಾರಾಟಕ್ಕೆ ಕೊಂಡೋಯ್ಯುತ್ತಾರೆ. ಜೊತೆಗೆ ವಿಜಯಪುರ ಧಾರವಾಡ, ಮಾಲ್ವಿ, ರಾಯಚೂರು, ಸೇರಿದಂತೆ ಆಂಧ್ರದಿಂದಲೂ ಇವರ ಕಂಬಳಿಗೆ ಬೇಡಿಕೆಯಿದೆ.
ಕಂಬಳಿಗಳಲ್ಲೇ ಮೂರು ರೀತಿಯಾದ ವಿಧಗಳಿದ್ದು ಅವುಗಳಲ್ಲಿ ಗದ್ದಿಗೆ ಕಂಬಳಿ, ಪೂಜಾ ಕಂಬಳಿ, ದೊಡ್ಡ ಕಂಬಳಿಯನ್ನು ನೇಯುತ್ತಾರೆ. ಕುರಿಮರಿಯ ಮೊದಲ ಉಣ್ಣೆಯಿಂದ ಸಣ್ಣ ಮಗ್ಗದ ಕಂಬಳಿಯನ್ನು ಸಹ ನೇಯುತ್ತಾರೆ
ಒಂದು ಕಂಬಳಿಯನ್ನು ನೇಯಲು ಮೊದಲು 2 ದಿನ ಉಣ್ಣೆಯನ್ನು ಸೋಸಿ, ನಂತರ ಚರಕದಿಂದ ದಾರವಾಗಿಸಿ ಕಂಬಳಿಯಾಗಿ ಮಾರ್ಪಡಿಸುತ್ತಾರೆ.
ದೇವರ ಚೌರಿಯಿಂದ ಬದುಕು ಬದಲು: ಕಳೆದ ನಲವತ್ತು ವರ್ಷಗಳಿಂದ ಆರಂಭಿಸಿದ ಈ ಕಾಯಕವು ಮೊದಲಿಗೆ ಕೇವಲ ಸಣ್ಣಪುಟ್ಟ ಕಂಬಳಿಯನ್ನು ಮಾಡಲಾಗುತ್ತಿತ್ತು, ಶಕ್ತಿದೇವತೆಗಳಿಗೆ ಉಣ್ಣೆಯಿಂದ ತಯಾರಿಸಿದ ಚೌರಿಯಿಂದ ಹೆಚ್ಚಿನ ಬೇಡಿಕೆ ಸಿಕ್ಕು ಅಲ್ಲಿಂದ ಇವರ ವಹಿವಾಟಿನ ಜೊತೆ ಬದುಕು ಸಹ ಬದಲಾಯಿತು ಈ ಜಡೆಯನ್ನು ಸಹ ಮಡಿಮೈಲಿಗೆಯಿಂದ ಮಾಡಲಾಗುತ್ತದೆ. ತೆಗೆದುಕೊಂಡ ಉಣ್ಣೆಯನ್ನು ಉಳಿಸಂತೆ ಮಾಡಲಾಗುತ್ತದೆ ಎನ್ನುತ್ತಾರೆ ಸುಭದ್ರಮ್ಮ.
ವ್ಯಾಪಾರದ ಜೊತೆ ಸೇವೆ: ಕಂಬಳಿ ಹಾಗೂ ಇತರ ಸಾಮಾಗ್ರಿಗಳ ಜೊತೆಗೆ ಮಕ್ಕಳಿಗೆ ಹಾಗೂ ಎಲ್ಲಾ ವಯಸ್ಕರಿಗೂ ದೃಷ್ಠಿದಾರವನ್ನು ದೇವರ ಸೇವೆಯಂತೆ ಭಾನುವಾರ ಮತ್ತು ಗುರುವಾರ ನೀಡಿ ಕೇವಲ ಅಡಿಕೆ ಎಲೆ ಜೊತೆ ನೀಡಿದರೇ ಮಾತ್ರ ದಕ್ಷಿಣೆ ಪಡೆಯುತ್ತಾರೆ. ಅದೇ ರೀತಿಯಾಗಿ ಐತಿಗಿ ಚರ್ಮರೋಗಕ್ಕೆ ಕಂಬಳಿಯನ್ನು ನೀಡುತ್ತಾರೆ. ದೈವಿಕ ಸೇವೆಯಾಗಿ ಚೌರಿ ಗೊರವಪ್ಪರಿಗೆ ಟೋಪಿ, ಕಂಬಳಿ ಸಹ ನೀಡುತ್ತಾರೆ.
ಡೊಳ್ಳು ತಯಾರಿಕೆಯಲ್ಲೂ ಸುಭಧ್ರಮ್ಮ ಸೈ: ಕೇವಲ ಉಣ್ಣೆಯ ಕಾಯಕವಲ್ಲದೇ ಆಡಿನ ಚರ್ಮದಿಂದ ಡೊಳ್ಳನ್ನು ಸಹ ಸುಭದ್ರಮ್ಮ ಅವರು ತಯಾರಿಸುತ್ತಾರೆ. ಕಸಾಯಿಖಾನೆಯಿಂದ ಚರ್ಮವನ್ನು ಪಡೆದು 3 ದಿನಗಳ ಕಾಲ ಒಣಗಿಸಿ ಕೂದಲು ತೆಗೆದು ಹದಮಾಡಿ ಡೊಳ್ಳನ್ನು ತಯಾರಿಸುತ್ತಾರೆ. ಕುಟುಂಬವೇ ಡೊಳ್ಳಿನ ಪ್ರದರ್ಶನ ತಂಡವಿರುವ ಕಾರಣ ಇಂತಿಷ್ಟು ಚರ್ಮವನ್ನು ತೆಗೆದಿಟ್ಟುಕೊಂಡಿರುತ್ತಾರೆ. ಡೊಳ್ಳಿನ ಎಡಭಾಗಕ್ಕೆ ಆಡಿನ ಚರ್ಮ ಹಾಗೂ ಬಲಭಾಗಕ್ಕೆ ಓತಿನ ಚರ್ಮವನ್ನು ಹಾಕಲಾಗುತ್ತದೆ.
ಡೊಳ್ಳು ಪ್ರದರ್ಶನಕ್ಕೆ ಮನೆಯ ಮೊಮ್ಮಕ್ಕಳು ಆಸಕ್ತಿಯಿಂದ ಭಾಗವಹಿಸುತ್ತಾರೆ.
ಉಣ್ಣೆ ಕುಶಲ ಕಲೆಯನ್ನು ಕಲಿಯಲು ಹಲವರು ಆಸಕ್ತಿ ತೋರಿಸಿದ್ದು, ಅದಲ್ಲದೇ ಇದರ ಕುರಿತಂತೆ ವಿದೇಶಿಗರು ಬಂದು ಮಾಹಿತಿಯನ್ನು ಪಡೆಕೊಂಡಿದ್ದಾರೆ. ಇವರ ಕೌಶಲ್ಯ ಸೇವೆ ಗುರುತಿಸಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘವು ಗೌರವಿಸಿದೆ. ಕೃಷಿ ವಿದ್ಯಾಲಯಗಳಲ್ಲಿ ಇದರ ಕುರಿತಂತೆ ಕಾರ್ಯಗಾರವನ್ನು ಸುಭದ್ರಮ್ಮ ನೀಡಿದ್ದು, ಮುಂದಿನ ಪೀಳಿಗೆಗೂ ನಮ್ಮ ಕುಲಕಸುಬು ಮುಂದುವರಿಯಲಿ, ಸರ್ಕಾರವೂ ಉಣ್ಣೆ ಕಾಯಕದ ಅಭಿವೃದ್ಧಿಗೆ ಯೋಜನೆಗಳನ್ನು ತರಬೇಕು ಎನ್ನುತ್ತಾರೆ.
ಕಾಗಿನೆಲೆ ಮಹಾಸಂಸ್ಥಾನ ಶ್ರೀಕನಕ ಗುರುಪೀಠ ವತಿಯಿಂದ ಪ್ರತಿವರ್ಷ ಸಂಕ್ರಾಂತಿಗೆ ಆಚರಿಸಲಾಗುವ ಹಾಲುಮತ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ಈ ತಿಂಗಳ 12ರಿಂದ ಆರಂಭವಾಗಲಿದ್ದು, 14ರಂದು 50 ಸಾವಿರ ನಗದಿನೊಂದಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಆರಂಭದಲ್ಲಿ ಜೀವನ ಮುನ್ನಡೆಸಲು ಆರಂಭಿಸಿದ ಉಣ್ಣೆ ಕಾಯಕವು ಇಂದು ಸೇವೆ ಜೊತೆ ಉದ್ಯಮವಾಗಿ ಮಾರ್ಪಟ್ಟಿದೆ. ಕಾಗಿನೆಲೆ ಗುರುಪೀಠವು ಹಾಲುಮತ ಸಂಸ್ಕೃತಿ ಸೇವೆ ಎಂದು ಗುರುತಿಸಿ ಕನಕರತ್ನ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ.

  • ಸುಭದ್ರಮ್ಮ ಕಾಡಮಂಚಪ್ಪ ಗೊಸೆಲೇರು, ಹಳೇಮಲಪನಗುಡಿ.
    ಕನಕರತ್ನ ಪ್ರಶಸ್ತಿ ವಿಜೇತೆ.

ಸಾಮಾನ್ಯವಾಗಿ ಮಹಿಳೆಯರ ಕಾರ್ಯ ಬೆಳಕಿಗೆ ಬರುವುದು ಕಡಿಮೆ, ಸುಭಧ್ರಮ್ಮ ಅವರ ಇಡೀ ಕುಟುಂಬವೇ ತಮ್ಮ ಕುಲಕಸುಬಿನಲ್ಲೇ ತೊಡಗಿಸಿದೆ. ಅದರಲ್ಲೂ ವಿಶೇಷವಾಗಿ ಸುಭಧ್ರಮ್ಮ ಕಲೆ, ಕೌಶಲ್ಯ ಜೊತೆಗೆ ದೈವಿಕದಲ್ಲೂ ತಮ್ಮನ್ನು ತೊಡಗಿಸಿಕೊಂಡು ಗೊರವರಿಗೆ ಟೊಪ್ಪಿ, ಕಂಬಳಿ ಹಾಗೂ ಶಕ್ತಿ ದೇವತೆಗೆ ಸಂಬಂಧಿಸಿದ ಚೌರಿಯನ್ನು ಉಣ್ಣೆಯಿಂದ ತಯಾರಿಸಿ ಕುಲಕಾಯಕದಲ್ಲಿ ನಿರತವಾಗಿದ್ದು, ಇವರಿಗೆ ಪ್ರಶಸ್ತಿ ಬಂದ ನಂತರ ಹಾಲುಮತದ ಅಧ್ಯಯನಕ್ಕೆ ಸಂಶೋಧನೆಗಳಿಗೆ ಹೆಚ್ಚಿನ ಪುಷ್ಠಿ ಸಿಕ್ಕುತ್ತದೆ.
-ಪ್ರೊ ಕೆ.ಎಂ.ಮೇತ್ರಿ
ಕವಿವಿ ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥರು ಹಾಗೂ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರು.

ವಿಶೇಷ ವರದಿ
ಅಭಿಷೇಕ್ ಸಿ